ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಮತ್ತೆ ಬೀದಿಗೆ ಬಂದಿದೆ. ಮೇಯರ್ ಆಯ್ಕೆ ಸಂಬಂಧ ತಮ್ಮನ್ನು ಪರಿಗಣಿಸದೇ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗ ಸದಸ್ಯರಿಗೆ ಮೇಯರ್ ಹುದ್ದೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿ ಬಾರಿ ಬಲಾಢ್ಯರ ಬೆಂಬಲಿಗರೇ ಮೇಯರ್ ಆಗುತ್ತಿದ್ದಾರೆ. ಬೆಂಗಳೂರು ಹೊರವಲಯವನ್ನು ಪ್ರತಿನಿಧಿಸುವ ಪಾಲಿಕೆ ಸದಸ್ಯರನ್ನು ಪರಿಗಣಿಸುತ್ತಿಲ್ಲ. ಈ ಬಾರಿ ಬೇಗೂರಿನ ಆಂಜನಪ್ಪ ಅಥವಾ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವೇಲುನಾಯಕ್ ಪೈಕಿ ಒಬ್ಬರಿಗೆ ಈ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಯರ್ ಆಯ್ಕೆ ಸಂಬಂಧ ನಡೆದ ಕಳೆದ ಎರಡು ಸಭೆಗಳಿಗೂ ನನ್ನನ್ನು ಆಹ್ವಾನಿಸದೇ ಕಡೆಗಣಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಸದ್ಯ ನಾನೋಬ್ಬನಷ್ಟೇ ಕಾಂಗ್ರೆಸ್ ಎಂ.ಪಿ ಇರುವುದು, ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷದ ವೇದಿಕೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಅಧಿಕಾರ ಹಂಚಿಕೆ, ಅಭಿವೃದ್ಧಿಯಲ್ಲಿ ನನ್ನ ಭಾಗಕ್ಕೆ ತಾರತಮ್ಯವಾಗಿದೆ. ಇದನ್ನು ಬಂಡಾಯ ಎಂದುಕೊಂಡರೂ ಪರವಾಗಿಲ್ಲ. ಮೇಯರ್ ಆಯ್ಕೆಗಾಗಿ ನಡೆಯುವ ಪಕ್ಷದ ಸಭೆಗೆ ನನ್ನನ್ನು ಆಹ್ವಾನಿಸುವುದಿಲ್ಲ. ಹೀಗಾದರೆ ಹೇಗೆ’ ಎಂದೂ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿ.ಕೆ ಶಿವಕುಮಾರ್ ಗೆ ಸಿಗಬೇಕೆಂದು ಸುರೇಶ್ ಬಹಳ ಪ್ರಯತ್ನಿಸಿದ್ದರು. ಹೀಗಾಗಿ ಡಿಕೆ ಸಹೋದರರನ್ನು ಸಿಎಂ ಸಿದ್ದರಾಮಯ್ಯ ಉದ್ದೇಶ ಪೂರ್ವಕವಾಗಿಯೇ ದೂರ ಇಟ್ಟಿದ್ದಾರೆ. ಹೀಗಾಗಿ ಕಳೆದ 2 ಸಭೆಗಳಿಗೂ ಸುರೇಶ್ ಅವರು ಹಾಜರಾಗದಂತೆ ಸಿಎಂ ಗಮನ ವಹಿಸಿದ್ದಾರೆ.
ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರ ಸಂಬಂಧ ಜೆಡಿಎಸ್ ಜೊತೆ ಮಾತುಕತೆ ನಡೆಸಲು ಡಿ.ಕೆ ಸುರೇಶ್ ಮಧ್ಯಸ್ಥಿಕೆ ವಹಿಸುತ್ತಾರೆ ಎಂದು ಪಕ್ಷ ಭರವಸೆ ನೀಡಿತ್ತು. ಆದರೆ ಸುರೇಶ್ ಅವರನ್ನು ಕಡೆಗಣಿಸಿರುವ ಸಿದ್ದರಾಮಯ್ಯಈ ಕೆಲಸವನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿಗೆ ವಹಿಸಿರುವುದು ಡಿ.ಕೆ ಸಹೋದರರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆದ ವೇಳೆ ಅವರ ತಾಯಿ ಗೌರಮ್ಮ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದರು.
ಸುರೇಶ್ ಅಸಮಾಧಾನಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಎಲ್ಲಾ ಶಾಸಕರು ಹಾಗೂ ಸಂಸದರ ಅಭಿಪ್ರಾಯ ಪಡೆದುಕೊಂಡು ಮೇಯರ್ ಅಭ್ಯರ್ಥಿ ಆಯ್ಕೆ ನಡೆಯುತ್ತದೆ ನಂತರ ಹೈಕಮಾಂಡ್ ಇದನ್ನು ಫೈನಲ್ ಮಾಡುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics