ರಾಜಕೀಯ

ಶಿಕಾರಿಪುರದಿಂದಲೇ ಸ್ಪರ್ಧೆ: ಬಿಎಸ್ ವೈ ಯೂಟರ್ನ್!

Srinivasamurthy VN
ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದಲೇ ಸ್ಪರ್ಧಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಶನಿವಾರ ಹೇಳಿದ್ದಾರೆ.

ಈ ಹಿಂದೆ ತಾವು ಉತ್ತರ ಕರ್ನಾಕದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದ ಹೇಳಿಕೆಯಿಂದ ಯೂಟರ್ನ್ ಹೊಡೆದಿರುವ ಯಡಿಯೂರಪ್ಪ ಅವರು, ನನ್ನ ರಾಜಕೀಯ ಜೀವನಕ್ಕೆ ಶಕ್ತಿ ಕೊಟ್ಟ ಕ್ಷೇತ್ರ ಶಿಕಾರಿಪುರ..ಹೀಗಾಗಿ ಮುಂಬರುವ  ಚುನಾವಣೆಯಲ್ಲಿ ಈ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಆ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಬಿಎಸ್ ವೈ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆಗೆ  ಯಡಿಯೂರಪ್ಪ ತೆರೆ ಎಳೆದಿದ್ದಾರೆ.

ಶನಿವಾರ ಶಿರಾಳಕೊಪ್ಪ ಪಟ್ಟಣದ ನೇರಲಗಿಯಲ್ಲಿ ನಡೆದ ಬಿಜೆಪಿ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, "ಶಿಕಾರಿಪುರದಿಂದಲೇ ಸ್ಪರ್ಧಿಸಬೇಕೆಂಬುದು ಕಾರ್ಯಕರ್ತರ ಆಸೆಯಾಗಿದೆ.  ಕೇವಲ ನಾಮಪತ್ರ ಸಲ್ಲಿಸಿ ನೀವು ರಾಜ್ಯ ಪ್ರಚಾರಕ್ಕೆ ಹೋಗಿ. ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸುವ ಹೊಣೆ ತಮ್ಮದೆಂದು ಕಾರ್ಯಕರ್ತರು ಹೇಳಿದ್ದಾರೆ. ಹೀಗಾಗಿ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುವೆ. ಆದರೆ ಕಾರ್ಯಕರ್ತರ ಒತ್ತಾಯ  ಸೇರಿದಂತೆ ಕ್ಷೇತ್ರದ ವಿಷಯಗಳನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟರೆ ಶಿಕಾರಿಪುರದಿಂದಲೇ ಸ್ಪರ್ಧಿಸಲು ಅನುವು ಮಾಡಿಕೊಡಬಹುದು" ಎಂದು ಅವರು ವಿಶ್ವಾಸ ಹೇಳಿದರು.

"ನನಗೆ ಕ್ಷೇತ್ರದ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 6ನೇ ಅತಿ ಹೆಚ್ಚು ಮತ ಗಳಿಸಿದ ಕ್ಷೇತ್ರ ಎಂಬ ಹೆಗ್ಗಳಿಕೆ ಶಿಕಾರಿಪುರಕ್ಕಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿ  ರಾಜ್ಯದ 150 ಕ್ಷೇತ್ರದಲ್ಲಿ ಗೆಲ್ಲಬೇಕಿದೆ ಎಂದು ಹೇಳಿದರು. ಒಟ್ಟಾರೆ ಬಿಎಸ್ ವೈ ಉತ್ತರ ಕರ್ನಾಟಕದ ಸ್ಪರ್ಧೆ ಚರ್ಚೆಗೆ ತೆರೆ ಬಿದ್ದಂತಾಗಿದೆ.
SCROLL FOR NEXT