ಬೆಂಗಳೂರು: ಅಮಿತ್ ಶಾ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಬಳ್ಳಾರಿ ಗಣಿದಣಿ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಸಮಾಧಾನಗೊಳಿಸಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಪಕ್ಷದಲ್ಲಿರುವ ರೆಡ್ಡಿ ನಿಷ್ಠರಿಗೆ ಅಮಿತ್ ಶಾ ಹೇಳಿಕೆಯಿಂದ ಆಘಾತವಾಗಿದೆ ಜೊತೆಗೆ ಅಸಮಾಧಾನದ ಹೊಗೆಯೂ ಎದ್ದಿದೆ. ಬಿಜೆಪಿಯ ಬಳ್ಳಾರಿ ಸಂಸದ ಶ್ರೀರಾಮುಲು ಸೇರಿದಂತೆ ಹಲವರು ಅಮಿತ್ ಶಾ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರು ಹಾಗೂ ಬಿ. ಶ್ರೀರಾಮುಲು ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಆದರೆ ಪಕ್ಷದಿಂದ ರೆಡ್ಡಿ ಸಹೋದರರಿಗೆ ಟಿಕೆಟ್ ನೀಡುವ ಸಂಬಂಧ ಪ್ರತಿಕ್ರಿಯಿಸಿದ ಅವರು, ದೋಷಿಗಳಿಗೆ ಯಾವುದೇ ಕಾರಣಕ್ಕೂ ಪಕ್ಷದ ಟಿಕೆಟ್ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಬಳ್ಳಾರಿಯ ಹಲವು ಭಾಗದ ಜನರಿಗೆ ರೆಡ್ಡಿ ಎಂದರೇ ಅಚ್ಚು ಮೆಚ್ಚು, ಬಳ್ಳಾರಿ ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲ ಹಲವು ಜಿಲ್ಲೆಗಳಲ್ಲಿ ಜನಾರ್ಧನ ರೆಡ್ಡಿ ಪ್ರಭಾವ ಹೆಚ್ಚಿದ್ದು ಶಾ ಹೇಳಿಕೆ ಅಸಮಾಧಾನ ತಂದಿದೆ. ಈ ಹಂತದಲ್ಲಿ ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೇರೆ ಅಭ್ಯರ್ಥಿಗಳು ಕಣಕ್ಕಿಳಿದರೇ ಪಕ್ಷಕ್ಕೆ ಹಾನಿಯಾಗುವುದು ಖಚಿತವಾಗಿದೆ.
ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿಯಿಂದ ಸ್ಪರ್ದಿಸುವ ಬಿಜೆಪಿ ಅಭ್ಯರ್ಥಿ ಗಳ ಗೆಲುವಿಗೆ ತೊಂದರೆ ಉಂಟು ಮಾಡಬಹುದು ಎಂದು ಊಹಿಸಲಾಗಿದೆ.
ಬಳ್ಳಾರಿ ಮೇಲೆ ತೀವ್ರವಾಗಿ ಹಿಡಿತ ಸಾಧಿಸಿರುವ ಬಿಜೆಪಿ ಸಂಸದ ಶ್ರೀರಾಮುಲು ಈ ಮೊದಲು ತಮ್ಮ ಸ್ನೇಹಿತ ಜನಾರ್ದನ ರೆಡ್ಡಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದರು, ಆದರೆ ಸದ್ಯ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics