ವಿಜಯೇಂದ್ರ ಮತ್ತು ಡಾ. ಯತೀಂದ್ರ
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವರುಣ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಕಣಕ್ಕಿಳಿಯಲಿದ್ದಾರೆ. ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಅಭ್ಯರ್ಥಿ ಎಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ನಿರ್ಧರಿಸಿದೆ.
ಮೈಸೂರು, ಚಾಮರಾನಗರ ಸೇರಿ ಒಟ್ಟು ಆರು ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಗರ ಹೊರವಲಯದ ರೆಸಾರ್ಟ್‌ನಲ್ಲಿ ಶುಕ್ರವಾರ ನಡೆದ ಬಿಜೆಪಿ ಸಭೆಯಲ್ಲಿ ವಿಜಯೇಂದ್ರ ಹೆಸರು ಮಾತ್ರ ಪ್ರಸ್ತಾಪವಾಗಿದೆ. ಹೀಗಾಗಿ ಸಿಎಂ ಪುತ್ರ ಡಾ.ಯತೀಂದ್ರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ಎದುರಾಳಿಯಾಗುವುದು ಬಹುತೇಕ ಖಚಿತವಾಗಿದೆ.
ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು 16 ಮಂದಿ ಉತ್ಸುಕರಾಗಿದ್ದರು, ಅವರನ್ನೆಲ್ಲಾ ಬದಿಗಿಟ್ಟು ವಿಜಯೇಂದ್ರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಮೇಲ್ಮನೆ ಸದಸ್ಯ ವಿ.ಸೋಮಣ್ಣ ಅವರಿಗೆ ಹನೂರು ಕ್ಷೇತ್ರದಿಂದ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ. ಹನೂರು ಕ್ಷೇತ್ರದಿಂದ ಪ್ರೀತಂ ನಾಗಪ್ಪ ಅವರು ಸ್ಪರ್ಧಿಸಲಿದ್ದಾರೆ.
ಇನ್ನೂ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಜೆಪಿ ಯಡಿಯೂರಪ್ಪ ಅವರು ಎಲ್ಇಡಿ ಪರದೆಗಳುಳ್ಳ 100 ವಾಹನಗಳಿಗೆ ಚಾಲನೆ ನೀಡಿದ್ದಾರೆ.