ರಾಜಕೀಯ

ಸಂಸತ್ ಕಲಾಪ ಬಲಿಯಾಗಲು ರಾಫೆಲ್ ಡೀಲ್, ನೀರವ್ ಮೋದಿ ಕಾರಣ: ರಾಹುಲ್ ಗಾಂಧಿ

Lingaraj Badiger
ಬೆಂಗಳೂರು: 23 ದಿನಗಳ ಸಂಸತ್‌ ಕಲಾಪ ಬಲಿಯಾಗಲು ರಾಫೆಲ್ ಡೀಲ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಹಗರಣ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾನುವಾರ ಹೇಳಿದ್ದಾರೆ.
ಸಂಸತ್ ಕಲಾಪ ಬಲಿಯಾಗಲು ಕಾಂಗ್ರೆಸ್ ಕಾರಣ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನೀರವ್ ಮೋದಿ ಪಿಎನ್ ಬಿಗೆ ವಂಚಿಸಿದ ಪ್ರಕರಣ ಮತ್ತು ರಾಫೆಲ್ ಡೀಲ್ ಬಗ್ಗೆ ಚರ್ಚೆಯಾಗಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಆದರೆ ಹಗರಣಗಳ ಬಗ್ಗೆ ಚರ್ಚೆ ಮಾಡಲು ಬಯಸದ ಮೋದಿ ಸರ್ಕಾರ, ಸಂಸತ್ ಕಲಾಪ ಬಲಿ ಪಡೆದಿದೆ ಎಂದು ಆರೋಪಿಸಿದರು.
ನಿನ್ನೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯವರ ಅಸಹಿಷ್ಣುತೆಯ ಕಾರಣದಿಂದ ಸಂಸತ್‌ ಕಲಾಪ ಬಲಿಯಾಗಿದೆ. ಇದನ್ನು ಪ್ರತಿಭಟಿಸಿ ಇದೇ 12ರಂದು ದೇಶದಾದ್ಯಂತ ಎನ್‌ಡಿಎ ಸಂಸದರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿಸಿದ್ದರು.
ಕಳೆದ ಮಾರ್ಚ್ 5ರಂದು ಆರಂಭವಾಗಿದ್ದ ಸಂಸತ್ ಕಲಾಪ ಒಂದೇ ಒಂದು ಮಸೂದೆಯನ್ನೂ ಅಂಗೀಕಾರ ಮಾಡಲಾಗದೇ ಕೇವಲ ಗದ್ದಲಗಳ ಗೊಂದಲದಲ್ಲೇ ಕಳೆದ ಶುಕ್ರವಾರ ಅಂತ್ಯಗೊಂಡಿದೆ. 
SCROLL FOR NEXT