ರಾಜಕೀಯ

ತೃತೀಯ ರಂಗವು ಭಾರತದ ಜನಸಾಮಾನ್ಯರೊಡನೆ ಇರಲಿದೆ: ತೆಲಂಗಾಣ ಸಿಎಂ ಕೆಸಿಆರ್

Raghavendra Adiga
ಬೆಂಗಳೂರು: ಲೋಕಸಭೆ ಚುನಾವಣೆಗೆ ಮುನ್ನ ಹೊಸ ರಾಷ್ಟ್ರೀಯ ರಂಗ - ತೃತೀಯ ರಂಗದ ರಚನೆ ಸಂಬಂಧ ಚರ್ಚೆ ನಡೆಸುವುದಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಶುಕ್ರವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ್ದಾರೆ.
ಭೇಟಿಯ ಬಳಿಕ ಮಾತನಾಡಿದ ರಾವ್ "ಇದು ಕೇವಲ ರಾಜಕೀಯ ಒಕ್ಕೂಟ ಮಾತ್ರವೇ ಆಗಿರುವುದಿಲ್ಲ, ಬದಲಿಗೆ ಭಾರತದ ಜನಸಾಮಾನ್ಯರಿಗಾಗಿ  ಕೆಲಸ ಮಾಡುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ(ಬಿಜೆಪಿ) ದೇಶವನ್ನು ಶೋಚನೀಯ ಸ್ಥಿತಿಗೆ ತಂದಿವೆ. ಎಂದ ಕೆಸಿಆರ್ "ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ 65 ವರ್ಷಗಳಿಂದ ಭಾರತವನ್ನು ಆಳ್ವಿಕೆ ನಡೆಸಿದೆ ಮತ್ತು ಅವರು ದೇಶವನ್ನು ಶೋಚನೀಯ ಸ್ಥಿತಿಗೆ ತಂದಿದ್ದಾರೆ, ನಮ್ಮ ತೃತೀಯ ರಂಗವು ಕೇವಲ ರಾಜಕೀಯ ಪಕ್ಷಗಳ ಒಕ್ಕೂಟ ಮಾತ್ರವೇ ಅಲ್ಲ ಅದು ಭಾರತದ ಜನಸಾಮಾನ್ಯರ ಜತೆಗಿರಲಿದೆ. ಜನಪರ, ಜನ ಸಾಮಾನ್ಯರ, ರೈತರ ಪರವಾದ ತೃತೀಯ ರಂಗವನ್ನು ರಚಿಸುವುದು ನಮ್ಮ ಉದ್ದೇಶ.." ಎಂದಿದ್ದಾರೆ.
2019 ಕ್ಕೂ ಮೊದಲು ರೈತರಿಗೆ ನೆರವಾಗಬಲ್ಲ ದೊಡ್ಡ ಕಾರ್ಯಸೂಚಿಯೊಂದಿಗೆ ತಾವು ಮುಂದೆ ಬರುವುದಾಗಿ ಮುಖ್ಯಮಂತ್ರಿ ರಾವ್ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕದಲ್ಲಿರುವ ಎಲ್ಲ ತೆಲುಗು ಭಾಷಿಕ ಮತದಾರರಿಗೆ ಮನವಿ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ರಾವ್ ಘೋಷಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ "ತೃತೀಯ ರಂಗ ಎನ್ನುವುದು ಕೇವಲ ಪಕ್ಷಗಳ ಒಕ್ಕೂಟವಲ್ಲ, ಇದು ರಾಷ್ಟ್ರೀಯ ಪಕ್ಷಗಳ ವಿರುದ್ಧದ ಹೋರಾಟ. ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಇದು ನಮ್ಮ ಮೊದಲ ಬೇಟಿ. ತೆಲಂಗಾಣ ಮುಖ್ಯಮಂತ್ರಿಯಾಗಿ ಕೆಸಿಆರ್ ಉತ್ತಮ ಕೆಲಸ ಮಾಡಿದ್ದಾರೆ.ಇಂದಿನ ಭೇಟಿಯಲ್ಲಿ ನಾವು ರೈತರ ಸಮಸ್ಯೆಗಳ ಕುರಿತಂತೆ ವಿಶೇಷವಾಗಿ ಚರ್ಚಿಸಿದ್ದೇವೆ" ಎಂದರು.
ಬೆಂಗಳೂರಿನ  ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಚಂದ್ರಶೇಖರ್ ರಾವ್ ಅವರು ಸುಮಾರು 2 ಗಂಟೆಕಾಲ ದೇವೇಗೌಡರ ಜೊತೆ ಮಾತುಕತೆ ನಡೆಸಿದರು. ಈ ಸಮಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ನಟ ಪ್ರಕಾಶ್ ರೈ, ಟಿಆರ್ ಎಸ್ ಪಕ್ಷದ ಸಂಸದರು, ಶಾಸಕರು ಉಪಸ್ಥಿತರಿದ್ದರು.
SCROLL FOR NEXT