ಸಿದ್ದರಾಮಯ್ಯ ಮಲ್ಲಿ ಕಾರ್ಜುನ ಖರ್ಗೆ, ಮತ್ತು ವೀರಪ್ಪ ಮೊಯ್ಲಿ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಲಸಿಗರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿರುವುದರ ಕುರಿತು ಪಕ್ಷದ ನಾಯಕರುಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ.ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ಒಳಗೆ ಅಸಮಾಧಾನ ಭುಗಿಲೆದ್ದಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಭವಾಗಿದೆ.
ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸ ‘10 ಜನಪಥ್’ನಲ್ಲಿ ಶುಕ್ರವಾರ ಬೆಳಿಗ್ಗೆ ಹಾಗೂ ಸಂಜೆ ಸುದೀರ್ಘ ಸಭೆ ನಡೆಸಿದ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯು, ಟಿಕೆಟ್ ಹಂಚಿಕೆಗಾಗಿ ರಾಜ್ಯ ಮುಖಂಡರು ಪಟ್ಟು ಹಿಡಿದಿದ್ದರಿಂದ ರಾತ್ರಿ 8ರ ವೇಳೆಗೆ ಸಭೆಯನ್ನು ಮೊಟಕುಗೊಳಿಸಿತು. ಹೀಗಾಗಿ ಶನಿವಾರ ಕೂಡ ಮತ್ತೆ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವ ಸಾಧ್ಯತೆಯಿದೆ.
ಇದುವರೆಗೂ ಅಭ್ಯರ್ಥಿಗಳ ಪಟ್ಟಿ.ಯನ್ನು ಅಂತಿಮಗೊಳಿಸಿಲ್ಲ, ನಾಳೆ ನಡೆಯುವ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸಭೆ ಬಳಿಕ ತಿಳಿಸಿದ್ದಾರೆ,.
ತಾವು ಸಿದ್ಧಪಡಿಸಿಕೊಂಡು ಬಂದಿದ್ದ 150ಕ್ಕೂ ಅಧಿಕ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ಬಯಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯಿಂದ ಕೆಂಡಾಮಂಡಲವಾದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ಇತರ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರಿರುವ ಶಾಸಕರು ಹಾಗೂ ಇತರ ಮುಖಂಡರಿಗೆ, ಹೈದರಾಬಾದ್ ಕರ್ನಾಟಕ ಭಾಗದ ಕೆಲವು ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸುವ ವಿಚಾರದಲ್ಲಿ ರಾಜ್ಯದ ಮುಖಂಡರ ನಡುವೆ ಒಮ್ಮತ ಮೂಡಲಿಲ್ಲ. ಒಂದು ಹಂತದಲ್ಲಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ವಲಸಿಗರಿಗೆ ಹಾಗೂ ಕಳಂಕಿತರಿಗೆ ಟಿಕೆಟ್ ನೀಡುವುದರಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಖರ್ಗೆ ಮತ್ತು ಮೊಯ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೇ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ 2 ಕ್ಷೇತ್ರಗಳಿಂದ ಸ್ಪರ್ಧಿಸಲು ಮಂದಾಗುತ್ತಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಜೊತೆಗೆ ಹಳೇಯ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ,
ಪಕ್ಷದ ಚುನಾವಣಾ ಪರಿಶೀಲನಾ ಸಮಿತಿ ಮುಖಂಡ ಮಧುಸೂದನ ಮಿಸ್ತ್ರಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್, ಸಿಇಸಿ ಮುಖಂಡರಾದ ಗಿರಿಜಾ ವ್ಯಾಸ್, ಅಂಬಿಕಾ ಸೋನಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಭೆಯಲ್ಲಿ ಭಾಗವಹಿಸಿದ್ದರು.
‘ಸಂಜೆ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರೇ ನೇತೃತ್ವ ವಹಿಸಿ ಮನವರಿಕೆ ಮಾಡಲು ಯತ್ನಿಸಿದರೂ ರಾಜ್ಯದ ಮುಖಂಡರು ಪಟ್ಟು ಸಡಿಲಿಸಲಿಲ್ಲ. ಆನಂದ್ ಸಿಂಗ್, ನಾಗೇಂದ್ರ,ಮತ್ತು ಅಶೋಕ್ ಖೇಣಿ ಅವರಿಗೆ ಟಿಕೆಟ್ ನೀಡಿರುವುದರಿಂದ ಖರ್ಗೆ ಮತ್ತು ಮೊಯ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics