ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಅರ್ಹ ಮಹಿಳಾ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್‍ನಲ್ಲಿ ನಿನ್ನೆ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಸಾವಿರ ಪುರುಷ ಮತದಾರರಿಗೆ ಪ್ರತಿಯಾಗಿ 953 ಮಹಿಳಾ ಮತದಾರರಿದ್ದರು. ಈಗ ಈ ಪ್ರಮಾಣ 972 ಕ್ಕೆ ಏರಿಕೆಯಾಗಿದೆ. ಜನಗಣತಿಯ ವಾಸ್ತವ ವರದಿಯಂತೆ ರಾಜ್ಯದಲ್ಲಿ 1 ಸಾವಿರ ಪುರುಷ ಮತದಾರರಿಗೆ 973 ಮಹಿಳಾ ಮತದಾರರಿದ್ದಾರೆ ಎಂದರು.
ರಾಜ್ಯದಲ್ಲಿ 8 ಲಕ್ಷ ಹೊಸ ಅರ್ಜಿಗಳು ಬಂದಿವೆ. ಪ್ರಸ್ತುತ 4.96 ದಾಖಲಾಗಿರುವ ಮತದಾರರಿದ್ದು 8 ಲಕ್ಷ ಹೊಸ ಅರ್ಜಿಗಳು ಬಂದಿವೆ. ಈ ಬಾರಿ 5 ಕೋಟಿಗೂ ಅಧಿಕ ಮತದಾರರು 58,000 ಮತ ಕೇಂದ್ರಗಳಲ್ಲಿ ಮತ ಚಲಾಯಿಸುವ ಸಾಧ್ಯತೆಯಿದೆ ಎಂದರು.
ಬೇಸಿಗೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮತದಾನದ ಅವಧಿ ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಓ.ಆರ್.ಎಸ್. ಮತ್ತಿತರ ಸೂಕ್ತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಚುನಾವಣೆಗೆ ನಿಯೋಜಿತರಾಗಿರುವ ಕೆಲವು ಅಧಿಕಾರಿಗಳು ಚುನಾವಣಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ಅಂತಹವರಿಗೆ ವಿಡಿಯೋ ಸಂವಾದ ಸೇರಿದಂತೆ ವಿವಿಧ ವಿಧಾನಗಳ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು. ಈ ಬಾರಿ ಮತದಾನಕ್ಕೆ ಬಳಸಲಾಗುತ್ತಿರುವ ಅತ್ಯಾಧುನಿಕ ವಿವಿಪ್ಯಾಟ್ ಮತಯಂತ್ರಗಳಲ್ಲಿ ಮುದ್ರಣವಾಗುವ ಮತಚೀಟಿಗಳಿಗೆ ಕ್ರಮ ಸಂಖ್ಯೆ ಅಳವಡಿಸುವ ಉದ್ದೇಶವಿಲ್ಲ. ಅಭ್ಯರ್ಥಿಗಳು ತಮಗೆ ಮತ ಹಾಕದವರನ್ನು ಪತ್ತೆ ಮಾಡಿ ಅವರನ್ನು ಗುರಿ ಮಾಡಿಕೊಳ್ಳುವ ಸಾಧ್ಯತೆಗಳನ್ನು ತಪ್ಪಿಸುವುದು ಆಯೋಗದ ಉದ್ದೇಶವಾಗಿದೆ ಎಂದರು.
ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತದಾರರಿಗೆ ಊಟ ವಿತರಣೆ ಮಾಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಣ
ಮಾಡಲಾಗುತ್ತಿದೆ, ಹಣ ಮತ್ತು ಮದ್ಯ ಸಾಗಾಟ ಮತ್ತು ಹಂಚುವುದನ್ನು ತಡೆಯಲು ರಾಜ್ಯಾದ್ಯಂತ ನಿಯೋಜಿಸಿರುವ ವಿಶೇಷ ಕಣ್ಗಾವಲು ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಜೀವ್ ಕುಮಾರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics