ರಾಜಕೀಯ

ಕೈ ಟಿಕೆಟ್ ಜಟಾಪಟಿ: ಹೈ ಕಮಾಂಡ್ ಸಂಧಾನ ಸೂತ್ರಕ್ಕೆ ಸೈ ಎಂದ ಸಿಎಂ ಸಿದ್ದು ಅಂಡ್ ಖರ್ಗೆ ಟೀಂ

Srinivasamurthy VN
ನವದೆಹಲಿ: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಭುಗಿಲೆದ್ದಿದ್ದ ಅಗ್ರ ನಾಯಕರ ನಡುವಿನ ಪ್ರತಿಷ್ಠೆಯ ಗುದ್ದಾಟಕ್ಕೆ ಕೊನೆಗೂ ತೆರೆಬಿದ್ದಿದೆ.
ಒಟ್ಟು 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್​ ಪಕ್ಷ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಕಾಂಗ್ರೆಸ್​ ವೆಬ್​ಸೈಟ್​ ಹಾಗೂ  ಟ್ವಿಟರ್​ ನಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. 
ಇನ್ನು ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಹಿರಿಯ ನಾಯಕರು ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನಿನ್ನೆ ನಡೆದ ಸಭೆಯಲ್ಲಿ ಬಿಬಿಎಂಪಿ ಮಾಜಿ ಆಯುಕ್ತ ಸಿದ್ದಯ್ಯ ಅವರಿಗೆ ಸಕಲೇಶ್ ಪುರದಿಂದ ಟಿಕೆಟ್ ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾಗ ಹಿರಿಯ ನಾಯಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಿಮ ಹಂತದಲ್ಲೂ ಹೊಸ ಹೊಸ ಹೆಸರುಗಳ ಸೇರ್ಪಡೆಗೆ ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ ಎಂದು ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. 
ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಒತ್ತಾಯ ಹೇರುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ, ಆರ್ ವಿ ದೇಶಪಾಂಡೆ. ವೀರಪ್ಪ ಮೊಯ್ಲಿ, ಬಿಕೆ ಹರಿಪ್ರಸಾದ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹಿರಿಯ ನಾಯಕರು ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗ ಸಚಿವರಾದ ಎಂಬಿ ಪಾಟೀಲ್ ಮತ್ತು ಕೆಜೆ ಜಾರ್ಜ್ ಅವರ ಮಾತು ಕೇಳುತ್ತಿದ್ದಾರೆ. ಸಿಎಂ ಅನಗತ್ಯವಾಗಿ ಜೆಡಿಎಸ್ ಪಕ್ಷವನ್ನು ಟೀಕಿಸುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದರು. 
ಅಲ್ಲದೇ ಪಕ್ಷದ ಸದಸ್ಯತ್ವವೇ ಇಲ್ಲದವರಿಗೆ ಟಿಕೆಟ್ ನೀಡಿದರೆ ಹೇಗೆ, ಪಕ್ಷದ ಸದಸ್ಯರು ಸಾಯಬೇಕೇ ಇದೇ ವೇಳೆ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಪಕ್ಷದ ಹಿರಿಯ ಮುಖಂಡರು ಸಂಧಾನ ಸಭೆ ನಡೆಸಿದ್ದು, ಅದು ಯಶಸ್ವಿಯಾಗಿದೆ ಎನ್ನಲಾಗಿದೆ. ಅಂತಿಮವಾಗಿ ಕೆಲವೊಂದು ಸಂಧಾನ ಸೂತ್ರಗಳೊಂದಿಗೆ ಬಿಕ್ಕಟ್ಟನ್ನು ಪರಿಹರಿಸಿದ ನಾಯಕರು ಜನರ ಎದುರು ಒಗ್ಗಟ್ಟು ತೋರಿಸುವ ಉದ್ದೇಶದಿಂದ ಭಾನುವಾರ ಮಾಧ್ಯಮಗಳ ಎದುರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಕಾಂಗ್ರೆಸ್​ನ ಎಲ್ಲ ನಾಯಕರು ಮತ್ತೊಮ್ಮೆ ಸಭೆ ಸೇರಿ ಗೊಂದಲವಿರುವ ಕೆಲವೇ ಕ್ಷೇತ್ರಗಳ ಬಗ್ಗೆ ತಮ್ಮ ಅಭಿಪ್ರಾಯ ನೀಡಿ ಪಟ್ಟಿ ಅಂತಿಮಗೊಳಿಸಿದ್ದಾರೆ. ಜತೆಗೆ ಜಾತಿ ಆಧಾರಿತ ಪ್ರಾತಿನಿಧ್ಯದ ಬಗ್ಗೆ ಚರ್ಚೆಯೂ ನಡೆದು ಟಿಕೆಟ್​ ಪಟ್ಟಿ ಅಂತಿಮಗೊಳಿಸಲಾಗಿದೆ.
SCROLL FOR NEXT