ರಾಜಕೀಯ

ಚುನಾವಣೆ ನಂತರ ಮೈತ್ರಿ ಬೇಕೆಂದರೆ ದೇವೇಗೌಡರನ್ನು ಟೀಕಿಸುವುದು ಬಿಡಿ: ಕಾಂಗ್ರೆಸ್ ಗೆ ಜೆಡಿಎಸ್ ಸಲಹೆ

Lingaraj Badiger
ಬೆಂಗಳೂರು: ಮುಂದಿನ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೆ ಜೆಡಿಎಸ್, ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುವ ಸುಳಿವು ನೀಡಿದೆ. 
ಚುನಾವಣೆ ನಂತರ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂದರೆ ಕಾಂಗ್ರೆಸ್ ಮೊದಲು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಟೀಕಿಸುವುದು ಬಿಡಬೇಕು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ಅಲಿ ಅವರು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ.
ದೇವೇಗೌಡರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಆಸಕ್ತಿ ಇಲ್ಲ, ಆದರೆ ಅವರು ಕಾಂಗ್ರೆಸ್ ನಾಯಕರ ಮಾತಿನ ವೈಖರಿಗೆ ಬೇಸರಗೊಂಡಿದ್ದಾರೆ. ಅದರಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ವೈಯಕ್ತಿಕವಾಗಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಡ್ಯಾನಿಶ್ ಹೇಳಿದ್ದಾರೆ. 
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ವಿರೋಧ ಪಕ್ಷಗಳನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ. ಆದ್ದರಿಂದ ಅವರು ಸ್ಥಳೀಯ ನಾಯಕರ ಮಾತಿಗೆ ಗಮನ ನೀಡಬಾರದು. ಏಕಂದರೆ ಅವರೆಲ್ಲರಿಗೂ ತಮ್ಮದೇ ಆದ ವೈಯಕ್ತಿಕ ಆಸಕ್ತಿಗಳನ್ನು ಹೊಂದಿದ್ದಾರೆ ಎಂದರು.
ರಾಹುಲ್ ಗಾಂಧಿಯವರು ಸ್ಥಳೀಯ ಕಾಂಗ್ರೆಸ್ ನಾಯಕರ ಮಾತಿಗೆ ಕಿವಿಗೊಡದೆ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಧಕ್ಕೆ ಉಂಟು ಮಾಡಬಾರದು ಎಂದು ಡ್ಯಾನಿಶ್ ಅಲಿ ಸಲಹೆ ನೀಡಿದ್ದಾರೆ.
SCROLL FOR NEXT