ಅಮಿತ್ ಶಾ ಮತ್ತು ಹಿರಿಯ ಸಂಶೋಧಕ ಚಿದಾನಂದಮೂರ್ತಿ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ಪ್ರಣಾಳಿಕೆಗಾಗಿ ಹಲವು ಚಿಂತಕರು ಹಾಗೂ ಸಾಹಿತಿಗಳ ಸಲಹೆ ಪಡೆದಿದ್ದಾರೆ.
ಹಿರಿಯ ಸಂಶೋಧಕ ಎಂ.ಚಿದಾನಂದಮೂರ್ತಿ ಅವರ ಮನೆಗೆ ತೆರಳಿದ ಶಾ ನೇತೃತ್ವದ ನಿಯೋಗ, ಪ್ರಣಾಳಿಕೆ ರಚನೆಗೆ ಸಲಹೆ ನೀಡುವಂತೆ ಕೋರಿತು. ನಾಡು–ನುಡಿ, ನೆಲ–ಜಲ, ಗಡಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಬೇಕು. ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ. ಹೀಗಾಗಿ, ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಬೇಕೆಂಬ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡಬಾರದು’ ಎಂದು ಚಿದಾನಂದಮೂರ್ತಿ ಒತ್ತಾಯಿಸಿದರು. ದೇಶಾದ್ಯಂತ 1ರಿಂದ 10ನೇ ತರಗತಿವರೆಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ
ನಂತರ ರಾಜರಾಜೇಶ್ವರಿ ನಗರದಲ್ಲಿರುವ ಕವಿ ಸಿದ್ಧಲಿಂಗಯ್ಯ ಅವರ ಮನೆಗೆ ಅಮಿತ್ ಶಾ ನಿಯೋಗ ಭೇಟಿ ನೀಡಿತು. ದಲಿತರ ಹಕ್ಕುಗಳನ್ನು ಮೊಟಕುಗೊಳಿಸುವಂಥ ಯಾವುದೇ ತಿದ್ದುಪಡಿ ತರಬಾರದು. ಬಡ್ತಿ ಮೀಸಲಾತಿ ರದ್ದತಿಯಿಂದ 20 ಸಾವಿರ ದಲಿತ ಅಧಿಕಾರಿಗಳಿಗೆ ಹಿಂಬಡ್ತಿಯಾಗುತ್ತದೆ. ಹೀಗಾಗಿ, ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಹೋರಾಟ ಮಾಡಬೇಕು ಎಂದು ಸಿದ್ಧಲಿಂಗಯ್ಯ ಮನವಿ ಮಾಡಿದರು.
ಬ್ಯಾಂಕ್ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು. ಖಾಸಗಿ ಕ್ಷೇತ್ರಗಳಲ್ಲೂ ದಲಿತರಿಗೆ ಮೀಸಲಾತಿ ಕಲ್ಪಿಸಬೇಕು ಎಂಬಂತಹ ದಲಿತರ ಹಲವಾರು ಸಮಸ್ಯೆಗಳನ್ನು ಅವರು ಶಾ ಗಮನಕ್ಕೆ ತಂದರು.