ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ವಿನಯ್
ಶಿವಮೊಗ್ಗ: ಶಿಕಾರಿಪುರ ಜನತೆ ನೇರ ಹೋರಾಟದಲ್ಲಿ ನಂಬಿಕೆ ಇಟ್ಟಿದದಾರೆ, ಹೀಗಾಗಿ ಶಿಕಾರಿಪುರದಿಂದ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಯುವಕನೊಬ್ಬ ಭರ್ಜರಿ ಸವಾಲು ಹಾಕಿದ್ದಾನೆ.
ವಿದ್ಯಾರ್ಥಿ ಎಂಬ ಹೆಸರಿನ ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ಕೆ.ಸಿ.ವಿನಯ್ ರಾಜವತ್ ಅವರು ಶನಿವಾರ ಬೆಳಗ್ಗೆ ಹೆಲಿಕಾಪ್ಟರ್‌ನಲ್ಲಿ ಶಿಕಾರಿಪುರಕ್ಕೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಯಡಿಯೂರಪ್ಪ ಅವರು ನಾಮಪತ್ರ ಸಲ್ಲಿಕೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಬಂದಂತೆ ಅವರು ಸಹ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಹೆಲಿಕಾಪ್ಟರ್‌ನಲ್ಲಿ ಒಂಟಿಯಾಗಿ ಬಂದ ವಿನಯ್ ಅವರನ್ನು ಸ್ನೇಹಿತರು ಮೈಸೂರು ಪೇಟ ಮತ್ತು ಭರ್ಜರಿ ಹಾರಗಳನ್ನು ಹಾಕುವ ಮೂಲಕ ಸ್ವಾಗತಿಸಿದರು. ಯಡಿಯೂರಪ್ಪ ಅವರು ತುರ್ತು ಸಂದರ್ಭಗಳಲ್ಲಿ ಶಿಕಾರಿಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಬರುತ್ತಾರೆ. ಶನಿವಾರ ಸಹ ಯಡಿಯೂರಪ್ಪ ಬರುತ್ತಾರೇನೋ ಎಂಬ ಕಾತುರದಿಂದ ಹೆಲಿಪ್ಯಾಡ್ ಬಳಿ ಸುತ್ತಮುತ್ತಲ ಗ್ರಾಮಗಳ ಮತ್ತು ಆ ರಸ್ತೆಯಲ್ಲಿ ಸಂಚರಿಸುವ ನೂರಾರು ಜನರು ಜಮಾಯಿಸಿದ್ದರು.
ನಾಮಪತ್ರ ಸಲ್ಲಿಕೆಗೆ ಯಡಿಯೂರಪ್ಪರಂತೆ ಹೆಲಿಕಾಪ್ಟರ್‌ನಲ್ಲಿ ಬರಬೇಕೆಂದು ಅವರ ಸ್ನೇಹಿತರ ಒತ್ತಾಸೆಯಾಗಿತ್ತು. ಅದಕ್ಕಾಗಿ ಅವರೇ ಹಣ ಸಂಗ್ರಹಿಸಿ ಹೆಲಿಕಾಪ್ಟರ್ ಬುಕ್ ಮಾಡಿದ್ದರಂತೆ. ಸ್ನೇಹಿತರ ಸಹಕಾರದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದ ಅವರು, ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಲಂಬಾಣಿ ಸಮುದಾಯ ಹೆಚ್ಚಿಗೆ ಇರುವ ಶಿಕಾರಿಪುರ ಜನತೆ ತನಗೆ ಬೆಂಬಲ ನೀಡುತ್ತಾರೆ ಎಂದು ವಿನಯ್ ಹೇಳಿದ್ದಾರೆ.
ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಗ್ರಾಮದವರಾದ ವಿನಯ್ ಸಹ್ಯಾದ್ರಿ ಕಾಲೇಜಿನ ಬಿಎಸ್ಸಿ ಪದವೀಧರ. ಬೆಂಗಳೂರಲ್ಲಿ ನೆಲೆಸಿರುವ ವಿನಯ್ ಅವರು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ. ವಿದ್ಯಾರ್ಥಿ ಸಂಘದ ಮೂಲಕ ವಿದ್ಯಾರ್ಥಿ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆತನ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ, ತಾಯಿ ಗೃಹಿಣಿ.
ನಟನೆಯಲ್ಲಿಯೂ ಆಸಕ್ತಿ ಹೊಂದಿರುವ ವಿನಯ್ ಕನ್ನಡ ಸಿನಿಮಾ ರಾಮದುರ್ಗ ಎಂಬ ಚಿತ್ರದಲ್ಲ ನಾಯಕನಾಗಿ ನಟಿಸಿದ್ದಾರೆ, ಕುಂಚನಹಳ್ಳಿಯಲ್ಲಿರುವ ಐದು ಎಕರೆ ಜಮೀನನಲ್ಲಿ ಜೋಳ ಕೃಷಿ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos