ಹಾಸನ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಪ್ರತಿಪಕ್ಷಗಳ ವಿರುದ್ದ ಪಕ್ಷಗಳು ಪ್ರತಿತಂತ್ರಗಳನ್ನು ರೂಪಿಸುತ್ತಿರುವ ನಡುವಲ್ಲೇ ಆಂತರಿಕ ರಾಜಕೀಯಕ್ಕೆ ಮುಂದಾಗಿರುವ ಬಿಜೆಪಿ, ಜೆಡಿಎಸ್'ಗೆ ಲಾಭ ಮಾಡುವ ಸಲುವಾಗಿ ಹಾಸನ, ಸಕಲೇಶಪುರ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಲು ಚಿಂತನೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಹಾಸನ, ಸಕಲೇಪುರ ಹಾಗೂ ಬಿಲೂರು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಯಾವುದೇ ರೀತಿಯ ಹೇಳಿಕೆಗಳನ್ನೂ ನೀಡಿಲ್ಲ. ಹೀಗಾಗಿ ಕೆಲ ಬಿಜೆಪಿ ನಾಯಕರು ಬಿಜೆಪಿ ವರಿಷ್ಠರ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ನಡುವಲ್ಲೇ, ಆಂತರಿಕ ರಾಜಕೀಯ ನಡೆಸುತ್ತಿರುವ ಬಿಜೆಪಿ ಜೆಡಿಎಸ್ ಜೊತೆಗೆ ಕೈಜೋಡಿಸುವ ಸಲುವಾಗಿ ಜೆಡಿಎಸ್'ಗೆ ಲಾಭ ಮಾಡಿಕೊಡಲು ದುರ್ಬಲ ಅಭ್ಯರ್ಥಿ ನಿಲ್ಲಿಸಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಈ ವರ್ತನೆಯಿಂದಾಗಿ ಹಾಸನ, ಬೇಲೂರು ಹಾಗೂ ಸಕಲೇಶಪುರ ಬಿಜೆಪಿ ಟಿಕೆಟ್ ಆಕಾಂಕ್ಷಿಗಲು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹಾಸನ, ಸಕಲೇಶಪುರಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಪ್ರೀತಂ ಜೆ ಗೌಡ ಹಾಗೂ ನಾರ್ವೆ ಸೋಮಶೇಖರ್ ಅವರಿಗೆ ಹಾಸನ ಹಾಗೂ ಸಕಲೇಶಪುರದಲ್ಲಿ ಟಿಕೆಟ್ ನೀಡುವ ಭರವಸೆಗಳನ್ನು ನೀಡಿದ್ದರು.
ಹೀಗಾಗಿ ಪ್ರೀತಂ ಹಾಗೂ ನಾರ್ವೆ ಸೋಮಶೇಖರ್ ಮತ್ತು ಹುಲ್ಲಹಳ್ಳಿ ಸುರೇಶ್ ಅವರು ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಗಳನ್ನು ಆರಂಭಿಸಿದ್ದಾರೆ.
ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಹಾಗೂ ಅರಸೀಕೆರೆ ಬಿಜೆಪಿ ಅಭ್ಯರ್ಥಿ ಅರುಣ್ ಸೋಮಣ್ಣ ಅವರು, ತಮ್ಮ ಕ್ಷೇತ್ರಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡಲಿದ್ದು, ನಾಮಪತ್ರ ಸಲ್ಲಿಸಲಿದ್ದಾರೆ.
ಈ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಲಿಂಗಾಯತರನ್ನು ನಿಲ್ಲಿಸಿದ್ದು, ಅರಸೀಕೆರೆಯಲ್ಲಿ ನಿಲ್ಲಲು ಅರುಣ್ ಸೋಮಣ್ಣ ಅವರಿಗೆ ಇಷ್ಟವಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಹೇಳಿಕೆ ನೀಡಿದ್ದ ಅರುಣ್ ಸೋಮಣ್ಣ ಅವರು ಕಾಂಗ್ರೆಸ್ ಲಿಂಗಾಯರನ್ನು ನಿಲ್ಲಿಸದೇ ಹೋದರೆ, ಅರಸೀಕೆರೆಯಲ್ಲಿ ಸ್ಪರ್ಧಿಸುತ್ತೇನೆಂದು ಹೇಳಿದ್ದರು.
ನಾರ್ವೆ ಸೋಮಶೇಖರ್ ಅವರು ಮಾತನಾಡಿ, ನನ್ನ ಹೆಸರನ್ನು ಪಕ್ಷ ಈಗಾಗಲೇ ಅಂತಿಮಗೊಳಿಸಿದ್ದು, ಭಾನುವಾರ ಪಟ್ಟಿಯನ್ನು ಘೋಷಣೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲೆ ಟಿಕೆಟ್ ಆಕಾಂಕ್ಷಿ ಪ್ರೀತಂ ಗೌಡ ಮಾತನಾಡಿ, ಸ್ಥಳೀಯ ನಾಯಕರೊಂದಿಗನ ವೈಮನಸ್ಸಿನಿಂದಾಗಿ ನನ್ನ ಹೆಸರನ್ನು ಘೋಷಣೆ ಮಾಡುತ್ತಿಲ್ಲ ಎಂದಿದ್ದಾರೆ.