ಮೈಸೂರು: ತಮ್ಮ ಪುತ್ರ ಬಿವೈ ವಿಜಯೇಂದ್ರ ಅವರಿಗೆ ವರುಣಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಲು ಬಿಜೆಪಿ ಅಥವಾ ಆರ್ ಎಸ್ ಎಸ್ ಕಾರಣವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.
ಬಿಜೆಪಿ ಇಂದು ಏಳು ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ವಿಜಯೇಂದ್ರ ಅವರ ಹೆಸರು ಇಲ್ಲ. ಆದರೆ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಲು ಕೇಂದ್ರವಾಗಲಿ ಅಥವಾ ಆರ್ ಎಸ್ ಎಸ್ ಕೈವಾಡವಾಗಲಿ ಇಲ್ಲ. ನಾನೇ ಬೇಡ ಎಂದು ತೀರ್ಮಾನ ಕೈಗೊಂಡಿದ್ದೇನೆ ಎಂದು ಬಿಎಸ್ ವೈ ಸ್ಪಷ್ಟಪಡಿಸಿದ್ದಾರೆ.
20 ದಿನಗಳ ಹಿಂದೆ ವರುಣಾ ಕ್ಷೇತ್ರಕ್ಕೆ ಕೆಲಸ ಮಾಡುವಂತೆ ನಾನೇ ನನ್ನ ಮಗ ವಿಜಯೇಂದ್ರನನ್ನ ಕಳುಹಿಸಿದ್ದೆ. ಆದರೆ ಈಗ ಟಿಕೆಟ್ ಬೇಡ ಸಾಮಾನ್ಯ ಕಾರ್ಯಕರ್ತನಾಗಿ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಕೆಲಸ ಮಾಡುವಂತೆ ತಿಳಿಸಿರುವುದಾಗಿ ಯಡಿಯೂರಪ್ಪ ವರದಿಗಾರರಿಗೆ ತಿಳಿಸಿದ್ದಾರೆ.
ದಯವಿಟ್ಟು ಯಾವುದೇ ಗೊಂದಲ ಮಾಡಬೇಡಿ ಹೈಕಮಾಂಡ್ ನಾನು ಹೇಳಿದ 95 ಪರ್ಸೆಂಟ್ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದೆ. ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ನಾನೇ ಮುಖ್ಯಮಂತ್ರಿಯಾಗುತ್ತೇನೆ. ವಿಜಯೇಂದ್ರನಿಗೆ ಬೇಸರವಾಗಿಲ್ಲ. ಆದರೆ ಎಲ್ಲವೂ ಸರಿ ಹೋಗುತ್ತದೆ ಎಂದರು.
ಇಂದು ಬೆಳಗ್ಗೆಯಷ್ಟೇ ಯಡಿಯೂರಪ್ಪ ಅವರು ಬಿಜೆಪಿ ಸಮಾವೇಶದಲ್ಲಿ ತಮ್ಮ ಪುತ್ರ ವಿಜಯೇಂದ್ರ ವರುಣಾದಿಂದ ಸ್ಪರ್ಧಿಸುತ್ತಿಲ್ಲ ಎಂದು ಘೋಷಿಸಿದ್ದರು.
ವರುಣಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯೇಂದ್ರ ಅವರು ಮೈಸೂರಿನಲ್ಲಿ ಮನೆ ಮಾಡಿದ್ದಲ್ಲದೇ, ಕಡಿಮೆ ಅವಧಿಯಲ್ಲಿ ಸಂಘಟನೆ ಬಲಪಡಿಸಿ, ಬಿರುಸಿನ ಪ್ರಚಾರವನ್ನು ನಡೆಸಿ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದರು. ಆದರೆ, ಇಂದು ನಡೆದ ದಿಢೀರ್ ಬೆಳವಣಿಗೆಯಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳುತ್ತಿದ್ದಂತೆ ವರುಣಾ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರು ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics