ಮರಿಸ್ವಾಮಿಗೆ ಸನ್ಮಾನ ಮಾಡಿದ ಕುಮಾರಸ್ವಾಮಿ
ಮೈಸೂರು: ಮೈಸೂರಿನಲ್ಲಿ ನಡೆಯುತ್ತಿದ್ದ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡ ಜಿಲ್ಲಾ ಪಂಚಾಯತ್ ಸದಸ್ಯ ಮರಿಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಸನ್ಮಾನಿಸಿದ್ದಾರೆ.
ಕುಮಾರ ಸ್ವಾಮಿ ಅವರು ತಂಗಿದ್ದ ಮೈಸೂರಿನ ಖಾಸಗಿ ರೆಸಾರ್ಟ್ ಗೆ ಮರಿಸ್ವಾಮಿ ಅವರನ್ನು ಕರೆಸಿಕೊಂಡ ಕುಮಾರ ಸ್ವಾಮಿ ಆತ್ಮೀಯವಾಗಿ ಬರ ಮಾಡಿಕೊಂಡರು. ಅಲ್ಲದೆ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಿದರು. ಈ ವೇಳೆ ಪಕ್ಷದ ಮತ್ತೊಬ್ಬ ನಾಯಕ ಜಿ ಟಿ ದೇವೇಗೌಡ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಜರಿದ್ದರು.
ಇದಕ್ಕೂ ಮೊದಲು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಒಬ್ಬ ಮುಖ್ಯಮಂತ್ರಿ ಕರೆದರೂ ನಾನು ಜೆಡಿಎಸ್ ಬಿಟ್ಟು ಬರೋಲ್ಲ ಎಂದು ಹೇಳುವ ಮೂಲಕ ಮರಿಸ್ವಾಮಿ ಪಕ್ಷ ನಿಷ್ಠೆ ತೋರಿಸಿದ್ದಾರೆ. ಮರಿಸ್ವಾಮಿಯಂತಹ ನಿಷ್ಟಾವಂತ ಕಾರ್ಯಕರ್ತರು ನಮ್ಮ ಮತ್ತು ಬಿಎಸ್ ಪಿ ಪಕ್ಷದಲ್ಲಿದ್ದಾರೆ. ಅವರೆಲ್ಲರ ಸಹಕಾರದಿಂದ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದರು.
ನಿನ್ನೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ ಮರಿಸ್ವಾಮಿ ಅವರನ್ನು ಪಕ್ಷದ ಪರವಾಗಿ ಮತಯಾಚನೆಗೆ ಬರಲು ಸಿದ್ಧರಾಮಯ್ಯ ಮನವಿ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಮರಿಸ್ವಾಮಿ, ಜೆಡಿಎಸ್ ಬೆಂಬಲಿಸುವುದಾಗಿ ಹೇಳಿದ್ದರು. ಬಳಿಕ ಇಬ್ಬರ ನಡುವೆ ಕೆಲ ಕ್ಷಣಮಾತಿಗೆ ಮಾತು ಬೆಳೆದು ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿತು. ಮಾತಿನ ಚಕಮಕಿಯ ವಿಡಿಯೋ ತುಣುಕು, ಸಾಮಾಜಿಕ ತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿವೆ.