ರಾಜಕೀಯ

ಪ್ರಣಾಳಿಕೆಯ ತಪ್ಪುಗಳ ಸರಮಾಲೆ, ಮರಾಠಿಗರ ಬಳಿ ಕ್ಷಮೆ: ಕನ್ನಡ ಅಸ್ಮಿತೆಗೆ ಸಿದ್ದರಾಮಯ್ಯರಿಂದ ಧಕ್ಕೆ?

Manjula VN
ಬೆಂಗಳೂರು; ಕನ್ನಡ ಭಾಷಾ ಪ್ರೇಮ ಮೆರೆದು ಆಗಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ಆದರೆ, ಪಕ್ಷದ ಚುನಾವಣಾ ಪ್ರಣಾಳಿಕೆಯ ಕನ್ನಡದ ಅವತರಣಿಕೆಯಲ್ಲಿ ಭಾರೀ ಮಟ್ಟದ ಲೋಪದೋಷ ಹಾಗೂ ಮರಾಠಿ ಭಾಷೆ ಬರಲಿಲ್ಲ ಎಂಬ ಕಾರಣಕ್ಕೆ ಮರಾಠಿಗರ ಬಳಿ ಕ್ಷಮೆಯಾಚಿಸಿರುವುದು ಇದೀಗ ಕನ್ನಡಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ. 
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಸಿದ್ದಫಡಿಸಲಾಗಿದ್ದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಸಂಬಂಧ ವಾಕ್ಯ ರಚನೆಗಳು ಹಾಗೂ ವಿಪರೀಕ ವ್ಯಾಕರಣ ದೋಷಗಳು ಕಂಡು ಬಂದಿದ್ದು, ಪ್ರಣಾಳಿಕೆಗೆ ವಿರೋಧ ಪಕ್ಷಗಳು ಟೀಕೆಗಳನ್ನು ಮಾಡಲು ಆರಂಭಿಸಿದ್ದವು. ಇದಲ್ಲದೆ, ಬೆಳಗಾವಿಯ ಚಿಕ್ಕೋಡಿ ಹಾಗೂ ನಿಪ್ಪಾಣಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗಿದ್ದ ಸಿದ್ದರಾಮಯ್ಯ ಅವರು, ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೇಳಿದರು. ಆಲ್ಲದೆ, ಮಹಾರಾಷ್ಟ್ರ ಗಡಿ ಪ್ರದೇಶವಾದ ಕಾರಣ, ತಮಗೆ ಮರಾಠಿ ಭಾಷೆ ಬರುವುದಿಲ್ಲ ಎಂದು ಮತ್ತೆ ಕ್ಷಮೆಯಾಚಿಸಿದರು.
ಈ ಹಿಂದೆ ಕೇಂದ್ರ ನಾಯಕರ ವಿರುದ್ಧ ಸಿದ್ದರಾಮಯ್ಯ ಅವರು ಕನ್ನಡ ಭಾಷೆಯ ಅಸ್ತ್ರ ಪ್ರಯೋಗಿಸಿ ತಮಗೆ ಹಿಂದಿ ಭಾಷೆ ಬರುವುದಿಲ್ಲ, ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿ ಎಂದು ಹೇಳಿ, ಕಾಲೆಳೆದಿದ್ದರು. ಇದಕ್ಕೆ ಸಾಕಷ್ಟು ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. 
ಇದರ ನಡುವಲ್ಲೇ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕನ್ನಡ ಅವತರಣಿಕೆಯಲ್ಲಿ ಬಾರೀ ಲೋಪದೋಷಗಳು ಕಂಡು ಬಂದಿದೆ. 
ಪ್ರಣಾಳಿಕೆಯಲ್ಲಿ ಐಟಿ-ಬಿಟಿ ಕ್ಷೇತ್ರಕ್ಕೆ ಕರ್ನಾಟಕ ಕೊಡುಗೆಯನ್ನು ವಿವರಿಸುವಾಗ 300 ಶತಕೋಟಿ ಡಾಲರ್ ವಹಿವಾಟನ್ನು ರಾಜ್ಯದಲ್ಲಿ ನಡೆದಿದೆ ಎಂದು ಹೇಳಲಾಗಿತ್ತು. ಆದರೆ, ಕರ್ನಾಟಕ ಒಟ್ಟು ನಿವ್ವಳ ಉತ್ಪನ್ನವೇ 300 ಶತಕೋಟಿ ಡಾಲರ್ ನಷ್ಟಿಲ್ಲ. ಇಂತಹ ಸ್ಪಷ್ಟವಾಗಿ ಎದ್ದುಕಾಣುವ ಹಲವು ಲೋಪದೋಷಗಳು ಪ್ರಣಾಳಿಕೆಯಲ್ಲಿ ಕಂಡು ಬಂದಿವೆ. 
ಇನ್ನು ಬೆಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಶನಿವಾರ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯ ಕನ್ನಡ ಅವತರಣಿಕೆಯಲ್ಲಿ ಭಾರೀ ಮಟ್ಟದ ಲೋಪದೋಷಗಳು ಕಂಡು ಬಂದಿದೆ. ನೀರು ಹರಿದು ಹೋಗವುದನ್ನು ತಡೆಗಟ್ಟಲು ಎಂಬುದನ್ನು ಹೇಳಲು ನೀಡು ಓಡಿ ಹೋಗುತ್ತಿದೆ ಎಂದು ತಪ್ಪು ತಪ್ಪಾಗಿ ಬರೆಯಲಾಗಿದೆ. ಪ್ರಣಾಳಿಕೆ ಎಂಬುದನ್ನು ಪ್ರನಾಳಿಕೆ ಎಂದು ಮುದ್ರಿಸಲಾಗಿದೆ. 16 ಪುಟಗಳ ಈ ಪ್ರಣಾಳಿಕೆಯಲ್ಲಿ ಸಾವಿರಾರು ತಪ್ಪುಗಳಿಗೆ ಎಂಬ ಟೀಕೆಗಳು ಕೇಳಿ ಬರತೊಡಗಿವೆ. 
ಪ್ರಣಾಳಿಕೆಯಲ್ಲಾಗಿರುವ ಲೋಪದೋಷಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಪ್ರತಿಪಕ್ಷಗಳು ಮುಂದಾಗಿದ್ದು, ಕಾಂಗ್ರೆಸ್ ಪ್ರಣಾಳಿಕೆಯಿಂದ ಕನ್ನಡದ ಕಗ್ಗೊಲೆಯಾಗಿದೆ ಎಂದು ಆರೋಪಿಸಿದ್ದಾರೆ. 
ಪ್ರಣಾಳಿಕೆಯ ಲೋಪದೋಷಗಳು ಒಂದೆಡೆಯಾದರೆ, ಮತ್ತೊಂದೆಡೆ ನಿಪ್ಪಾಣಿ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಮನವೊಲಿಸಲು ಸಿದ್ದರಾಮಯ್ಯ ಅವರು ಕ್ಷಮೆ ಕೇಳಿರುವುದು ಕನ್ನಡಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ. 
SCROLL FOR NEXT