ರಾಜಕೀಯ

ಗಾಂಧಿ, ನೆಹರೂ ಟೀಕಿಸುವವರು ದ್ರೋಹಿಗಳು : ರಮಾನಾಥ್ ರೈ

Nagaraja AB

ಮಂಗಳೂರು: ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಮಂತ್ರಿ ಜವಹರ್ ಲಾಲ್ ನೆಹರೂ ಅವರನ್ನು ಟೀಕಿಸುವವರು ದ್ರೋಹಿಗಳು ಎಂದು ಕಾಂಗ್ರೆಸ್ ನಾಯಕ ಬಿ. ರಮಾನಾಥ್ ರೈ ಕಿಡಿಕಾರಿದ್ದಾರೆ.

ಕೆಲ ಕಿಡಿಗೇಡಿಗಳಿಂದ  ಈ ನಾಯಕರ ನಿಲುವುಗಳನ್ನು  ಟೀಕಿಸುವ ಕೃತ್ಯ ನಡೆಯುತ್ತಿದೆ. ಅಂತಹವರು ದೇಶ ವಿರೋಧಿಗಳು ಅಥವಾ ದ್ರೋಹಿಗಳು ಎಂದು ಕರೆದರು.

 ಕ್ವಿಟ್ ಇಂಡಿಯಾ ಆಂದೋಲನಕ್ಕೆ 76 ವರ್ಷ ತುಂಬಿದ ಹಿನ್ನೆಲೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ  ಸಮಾರಂಭದಲ್ಲಿ ಮಾತನಾಡಿದ ಅವರು, ಈ ಇಬ್ಬರು ನಾಯಕರು ದೇಶಕ್ಕಾಗಿ ಮಾಡಿರುವ ತ್ಯಾಗವನ್ನು ಯಾರೂ ನಿರಾಕರಿಸುವಂತಿಲ್ಲ ಎಂದು ಹೇಳಿದರು.

ನೆಹರೂ, ಮಹಾತ್ಮಗಾಂಧಿ ವಿಚಾರದಲ್ಲಿ ತಪ್ಪಾಗಿ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎನ್ನುವಂತೆ ಟೀಕಿಸಲಾಗುತ್ತಿದೆ. ಆದರೆ, ಈ ಇಬ್ಬರು ನಾಯಕರು ಮಾಡಿದ ತ್ಯಾಗ ಫಲವಾಗಿ ಇಂದು ನಾವು ಶಾಂತಿಯಿಂದ ಬದುಕುವಂತಾಗಿದೆ ಎಂದರು.

ಈ ಮಧ್ಯೆ ವೇದಿಕೆಯಲ್ಲಿಯೇ ಕಾಂಗ್ರೆಸ್ ಪಕ್ಷದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಕಾಂಗ್ರೆಸ್  ಅಲ್ಪಸಂಖ್ಯಾತ ಘಟಕದ ಲೊರೆನ್ಸ್ ಹಾಗೂ  ಐಎನ್ ಟಿಯುಸಿಯ ಪುನೀತ್ ಶೆಟ್ಟಿ  ಬೆಂಬಲಿಗರು ಪರಸ್ಪರ ಕಿತ್ತಾಡಿಕೊಂಡರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ  ಬೆಂಬಲಿಗರು ಕೆಲ ದಿನಗಳ ಮೇಲೆ ತಮ್ಮ ಮೇಲೆ ಹಲ್ಲೆ ನಡೆಸಿದ್ದು, ನಕಲಿ ದೂರು ದಾಖಲಿಸಿದ್ದಾರೆ ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದರು.  ಜಗಳ ಏಕೆ ಸಂಭವಿಸಿತ್ತು ಎಂಬ ಬಗ್ಗೆ ಗೊತ್ತಿಲ್ಲ ಎಂದು ಮಿಥುನ್ ರೈ ಹೇಳಿದರು.
ಉಭಯ ಗುಂಪಿಗೂ ನೋಟಿಸ್ ನೀಡುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.
SCROLL FOR NEXT