ಬೆಂಗಳೂರು: ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತಂತೆ ಆ.22 ರಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಚರ್ಚೆ ಚರ್ಚೆ ನಡೆಸುತ್ತೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೊಡಲು ಪ್ರವಾಹ ಪರಿಸ್ಥಿತಿ ಕುರಿತಂತೆ ಈಗಾಗಲೇ ಮೋದಿಯವರ ಬಳಿ ಮಾತನಾಡಿದ್ದೇನೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಎಲ್ಲಾ ರೀತಿಯ ಅಗತ್ಯ ಸಹಾಯ ಮಾಡುವುದಾಗಿ ಭರವಸೆಗಳನ್ನು ನೀಡಿದ್ದಾರೆಂದು ಹೇಳಿದ್ದಾರೆ.
ಕೊಡಲು ಪರಿಸ್ಥಿತಿ ಕುರಿತಂತೆ ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸುತ್ತೇನೆ. ಅಗತ್ಯ ಆರ್ಥಿಯ ನೆರವು ನೀಡುವಂತೆ ಹಾಗೂ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಇದಲ್ಲದೆ, ಸಾಧ್ಯವಾದರೆ, ಕೊಡಗು ಜಿಲ್ಲೆಯಲ್ಲಿ ವೈಮಾನಿ ಸಮೀಕ್ಷೆ ನಡೆಸುವಂತೆಯೂ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.
ಬಿಜೆಪಿ ಶಾಸಕರು ಹಾಗೂ ಎಂಎಲ್'ಸಿಗಳು ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದು, ಒಂದು ತಿಂಗಳ ವೇತನ ನೀಡಲು ನಿರ್ಧರಿಸಿದ್ದಾರೆ. ಶೀಘ್ರದಲ್ಲಿಯೇ ಚೆಕ್ ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರ ಕುರಿತಂತೆ ಮಾತನಾಡಿದ ಅವರು, ಮಳೆಯು ಒಬ್ಬೊಬ್ಬ ವ್ಯಕ್ತಿಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಪ್ರತೀಯೊಬ್ಬರಲ್ಲೂ ಒಂದೊಂದು ನೋವಿನ ಕಥೆಯಿದೆ. ರಾಜ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಿದೆ. ಹಲವರು ಮನೆಗಳನ್ನು ಕಳೆದುಕೊಂಡು, ನಿರಾಶ್ರಿತರಾಗಿದ್ದಾರೆಂದು ಹೇಳಿದ್ದಾರೆ.
ಕೊಡಗು ಜನರಿಗೆ ನಿವಾಸಗಳನ್ನು ಕಲ್ಪಿಸಲು ಹಾಗೂ ಅವರ ವ್ಯವಸ್ಥೆಗಳು ಮತ್ತೆ ಪುನರ್ ನಿರ್ಮಾಣಗೊಳ್ಳಲು ಜನರು ಸಹಾಯ ಮಾಡಬೇಕಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಗಳನ್ನು ನೀಡಬೇಕಿದೆ. ಪಕ್ಷಗಳಭೇದವನ್ನು ಬದಿಗೊತ್ತಿ, ಕೊಡಗು ಜನರಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ.