ರಾಜಕೀಯ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಭಾರೀ ಅವ್ಯವಹಾರ: ಬಿಜೆಪಿ ಆರೋಪ

Shilpa D
ಬೆಂಗಳೂರು: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಸುಮಾರು 2016-17ನೇ ಹಣಕಾಸು ವರ್ಷದಲ್ಲಿ ವೆಚ್ಚ ಹಾಗೂ ಸ್ವೀಕೃತಿಯಲ್ಲಿ ಶೇ. 19ರಷ್ಟು ಹಣ ಅಂದರೆ ಸುಮಾರು 35,000 ಕೋಟಿ ರೂ. ತಾಳೆಯಾಗದಿರುವುದು ಮಹಾಲೇಖಪಾಲರ ವರದಿಯಿಂದ ಬಯಲಾಗಿದ್ದು ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿವರಣೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.
ವಿಧಾನಸೌಧದಲ್ಲಿ ಬಿಜೆಪಿ ಎಂಎಲ್ ಸಿ ಎನ್. ರವಿ ಕುಮಾರ್ ,ಸಿಎಜಿ ವರದಿ ಆಧರಿಸಿ ರಾಜ್ಯ ಸರ್ಕಾರದಿಂದ ನಡೆದಿರುವ ಅಕ್ರಮ, ಅನುದಾನ ದುರ್ಬಳಕೆ, ದುಂದುವೆಚ್ಚ, ವಂಚನೆ ಕುರಿತಂತೆ ಆರ್ಥಿಕ ತಜ್ಞರೊಂದಿಗೆ ಅಧ್ಯಯನ ನಡೆಸಿ ಹೊರತಂದಿರುವ 36 ಪುಟಗಳ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದ ಪ್ರತಿಷ್ಠಿತ ಆರ್ಥಿಕ ಮೌಲ್ಯಮಾಪನ ಸಂಸ್ಥೆಯಾದ ಮಹಾಲೇಖಪಾಲರು ಶೇ.19ರಷ್ಟು ಹಣದ ವಿವರ ತಾಳೆಯಾಗುತ್ತಿಲ್ಲ ಎಂಬುದಾಗಿ ವರದಿಯಲ್ಲಿ ಉಲ್ಲೇಖೀಸಿದ್ದಾರೆ. 
ಸಿದ್ದರಾಮಯ್ಯ ಅವರ ಸರ್ಕಾರ 10 ಪರ್ಸೆಂಟ್‌ ಅಲ್ಲ 19 ಪರ್ಸೆಂಟ್‌ ಅಕ್ರಮದ ಸರ್ಕಾರ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ವಾಗ್ಧಾಳಿ ನಡೆಸಿದರು. ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ನಿಯಮ 61 ಹಾಗೂ ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಬೇಕು.
 ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರ ಎಂದು ಆರೋಪಿಸಿದ್ದ ಎಚ್‌.ಡಿ.ಕುಮಾರಸ್ವಾಮಿಯವರು ನೈತಿಕತೆಯಿದ್ದರೆ ಸಿಎಜಿ ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರು ಅಕ್ರಮ ನಡೆಸಿದ್ದಾರೆ ಎಂಬುದನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
SCROLL FOR NEXT