ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ರೈತರನ್ನು ಗೂಂಡಾಗಳೆಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ಅಧಿಕಾರ ಬಿಟ್ಟು ತೊಲಗಿ ಎಂಬ ಉದ್ದೇಶದಿಂದ ಬಿಜೆಪಿ ಬೃಹತ್ ರೈತರ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನೂ ಗೂಂಡಾಗಳೆಂದು ಕರೆಯುವ ಮೂಲಕ ಕುಮಾರಸ್ವಾಮಿಯವರು ರೈತರಿಗೆ ಅವಮಾನ ಮಾಡಿದ್ದಾರೆ. ತಮ್ಮ ಹುಟ್ಟೂರಿನ ಸುತ್ತಮುತ್ತಲಿನ ನಾಲ್ಕು ಜಿಲ್ಲೆಗಳಿಗೆ ಮಾತ್ರವೇ ಸೀಮಿತರಾಗಿರುವ ಮುಖ್ಯಮಂತ್ರಿಗಳು, ರಾಜ್ಯದ ಇತರೆ ಭಾಗಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ವಿರುದ್ಧ ಅಧಿಕಾರ ಬಿಟ್ಟು ತೊಲಗಿ ಎಂಬ ಉದ್ದೇಶದಿಂದ ಬಿಜೆಪಿ ಬೃಹತ್ ರೈತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಯಲ್ಲಿ ಕನಿಷ್ಠ 1 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಪರಿಸ್ಥಿತಿಯಿದ್ದರೂ ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳು ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಹೀಗಿರುವಾಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡ್ಯದಲ್ಲಿ ತಾವೇ ನೆಟ್ಟ ಭತ್ತ ಕಟಾವು ಮಾಡಿ ಪೂಜೆ ಸಲ್ಲಿಸಿರುವುದು ಕೇವಲ ಶೋಗೋಸ್ಕರ ಎಂದು ಆರೋಪಿಸಿದ್ದಾರೆ.
ಬರಗಾಲದಿಂದ ತತ್ತರಿಸಿರುವ ಉತ್ತರ ಕರ್ನಾಟಕವನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸಮ್ಮಿಶ್ರ ಸರ್ಕಾರ ಬರಗಲಾವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಿಜೆಪಿ 5 ತಂಡಗಳನ್ನು ಮಾಡಿ ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಕೈಗೊಂಡಿದೆ. ಕುಮಾರಸ್ವಾಮಿಯವರಿಗೆ ಒಂದು ಕ್ಷಣವೂ ನೈತಿಕತೆ ಇಲ್ಲ. ಬಿಜೆಪಿ, ಮಾಧ್ಯಮಗಳ ಪ್ರತಿನಿಧಿಗಳ ಬಗ್ಗೆ ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ರೈತ ಹೋರಾಟಗಾರರನ್ನು ಗೂಂಡಾಗಳು ಎಂದು ಕರೆದಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ರಣತಂತ್ರವನ್ನು ರೂಪಿಸಲಾಗಿದ್ದು, ಅಧಿಕಾರವನ್ನು ಬಿಟ್ಟು ತೊಲಗಿ ಎಂಬ ಉದ್ದೇಶದಿಂದ ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆಂ. ರಾಜ್ಯದ ರೈತರು ಜ್ವಲಂತ ಸಮಸ್ಯೆಗಲನ್ನು ಎದುರಿಸುತ್ತಿದ್ದಾರೆ. ನಾವು ಸಮಸ್ಯೆಗಳ ಕುರಿತು ಚರ್ಚೆ ಮಾಡಲಿದ್ದೇವೆಂದಿದ್ದಾರೆ.