ರಾಜಕೀಯ

ಚಳಿಗಾಲ ಅಧಿವೇಶನ: ಖಾಲಿ ಹೊಡೆಯುತ್ತಿದ್ದ ಕುರ್ಚಿಗಳು, ಸರ್ಕಾರದ ವಿರುದ್ಧ ಬಿಜೆಪಿ ತರಾಟೆ

Manjula VN
ಬೆಳಗಾವಿ: ಸೋಮವಾರ ನಡೆದ ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಹಲವು ನಾಯಕರು ಗೈರು ಹಾಜರಾಗಿದ್ದ ಹಿನ್ನಲೆಯಲ್ಲಿ, ಹಲವು ಪ್ರಮುಖ ವಿಚಾರಗಳ ಬಗ್ಗೆ ಸೂಕ್ತ ರೀತಿಯಲ್ಲಿ ಚರ್ಚೆಗಳು ನಡೆಯದಿದ್ದ ಕಾರಣ ಆಡಳಿತಾರೂಢ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. 
ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವು ಹಿರಿಯ ಸಂಪುಟ ಸದಸ್ಯರು ನಿನ್ನೆ ನಡೆದ ಅಧಿವೇಶನದ ವೇಳೆ ಗೈರು ಹಾಜರಾಗಿದ್ದರು. ಇದರಿಂದ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗಳಿಗೆ ಅಡ್ಡಿಯುಂಟಾಗಿತ್ತು. ಪ್ರಶ್ನೋತ್ತರ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. 
ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ವೇಳೆ ಶಾಸಕರು ಹಾಗೂ ಸಚಿವರ ಪ್ರವಾಸಕ್ಕೆ ಸರ್ಕಾರ ಹಣವನ್ನು ಖರ್ಚು ಮಾಡುತ್ತದೆ. ಆದರೆ, ಸೋಮವಾರದ ಅಧಿವೇಳನ ವೇಳೆ ಶೇ.50 ರಷ್ಟು ಶಾಸಕರಷ್ಟೇ ಹಾಜರಿದ್ದರು ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. 
ಉಭಯ ಸದನಗಳಲ್ಲಿ ಅಧಿವೇಶನಕ್ಕೆ ಆಗಮಿಸಿದ್ದ ಸಚಿವ ಸಂಖ್ಯೆ ಅತ್ಯಂತ ವಿರಳವಾಗಿತ್ತು. ಇದರಿಂದ ಹಲವು ವಿಚಾರಗಳ ಬಗ್ಗೆ ನಡೆಯಬೇಕಿದ್ದ ಗಂಭೀರ ಚರ್ಚೆಗಳ ಮೇಲೆ ಪರಿಣಾಮ ಬೀರಿತ್ತು. 
ಕೇವಲ ಔಪಚಾರಿಕತೆಗಷ್ಟೇ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುತ್ತಿದೆ. ಅಧಿವೇಶನದ ವೇಳೆ ಕೇವಲ ಶೇ.50ರಷ್ಟು ಶಾಸಕರಷ್ಟೇ ಹಾಜರಿದ್ದರು. ಇಷ್ಟು ಚಿಕ್ಕದಾದ ಅಧಿವೇಶನ ಎಷ್ಟರ ಮಟ್ಟಿಗೆ ತಾನೆ ಪರಿಣಾಮಕಾರಿಯಾಗಿರಬಲ್ಲದು. ಶಾಸಕರಿಗೆ ಹಾಗೂ ಸಚಿವರಿಗೆ ಇದೊಂದು ಪ್ರವಾಸದಂತಾಗಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಹೇಳಿದ್ದಾರೆ. 
ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ನಿನ್ನೆ ಚರ್ಚೆ ನಡೆಯಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಬರ ವಿಚಾರ ಅತ್ಯಂತ ಗಂಭೀರ ವಿಚಾರವಾಗಿದ್ದು, ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ಯಾವ ಸಚಿವರು ಸದನದಲ್ಲಿ ಹಾಜರಿದ್ದರು? ಎಂದು ಪ್ರಶ್ನಿಸಿದ್ದಾರೆ. 
ಪಂಚರಾಜ್ಯಗಳ ಪೈಕಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಭರ್ಜರಿ ಗೆಲವು ಸಾಧಿಸಿದ್ದ ಹಿನ್ನಲೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ನಿನ್ನೆ ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜಿಸಿದ್ದರು. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸದನಕ್ಕೆ ಗೈರು ಹಾಜರಾಗಿದ್ದರು. ಮೂಲಗಳ ಪ್ರಕಾರ ಇನ್ನೂ ನಾಲ್ಕು ದಿನಗಳ ಕಾಲ ಹಲವು ನಾಯಕರು ಗೈರು ಹಾಜರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಡಿ.22 ರಂದು ಸಂಪುಟ ವಿಸ್ತರಣೆ ಇರುವ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಗೆ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ಹಾಗೂ ಈಶ್ವರ್ ಖಂಡ್ರೆಯವರು ತೆರಳಲಿದ್ದಾರೆ. 
SCROLL FOR NEXT