ಬೆಂಗಳೂರು: ಸಂತೋಷ್ ಹತ್ಯೆ ವಿಚಾರ ಸಂಬಂಧ ರಾಜ್ಯದಲ್ಲಿ ಮತ್ತೆ ರಾಜಕೀಯ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದು, ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಸಂತೋಷ್ ಹತ್ಯೆ ಸಂಬಂಧ ಗೃಹ ಸಚಿವ ರಾಮಲಿಂಗಾ ರೆಡ್ಡಿ ನೀಡಿದ್ದ ಹೇಳಿಕೆ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಬಿಎಸ್ ಯಡಿಯೂರಪ್ಪ ಅವರು, ರಾಮಲಿಂಗಾ ರೆಡ್ಡಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ಹೇಳಿಕೆಗಳನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಬಿಎಸ್ ಯಡಿಯೂರಪ್ಪ ಅವರು, "ಸಾಯಿಸಬೇಕು ಅಂತ ಇರ್ಲಿಲ್ಲ, ಸುಮ್ನೆ ಚುಚ್ಚಿದ ಅಷ್ಟೇ" ಎಷ್ಟು ಹಗುರವಾಗಿ ಹೇಳಿಬಿಟ್ಟಿರಿ ರಾಮಲಿಂಗಾರೆಡ್ಡಿಯವರೇ? ಸುಮ್ನೆ ಚುಚ್ಚಿದರೂ ಹೋದದ್ದು ಪ್ರಾಣವೇ ಅಲ್ಲವೇ?ಅಷ್ಟು ಕಡೆಯಾಯಿತೇ ಹಿಂದೂಗಳ ಪ್ರಾಣ? 'ಮುಗ್ಧ ಅಲ್ಪಸಂಖ್ಯಾತರ ಮೇಲಿನ ಪ್ರಕರಣವನ್ನು ಕೈಬಿಡಲು ನಿರ್ಧರಿಸಿದ್ದು ಇಂಥವರನ್ನು ಬೆಂಬಲಿಸುವುದಕ್ಕಾಗಿಯೇ? ಎಂದು ಬಿಎಸ್ ವೈ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಸಂತೋಷ್ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿ ವಾಸಿಂ ತಂದೆಯ ಕುರಿತು ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, "ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಗೈದ ವಸೀಮ್‌ನ ತಂದೆ ಖಾದರ್ ಷರೀಫ್, ಕಾಂಗ್ರೆಸ್ ಮುಖಂಡರೆಂದು ತಿಳಿದು ಬಂದಿದೆ. ಈ ಮೂಲಕ ಕಾಂಗ್ರೆಸ್‌ನ ಕ್ರೂರ ಮನಸ್ಥಿತಿ ಮತ್ತೊಮ್ಮೆ ಅನಾವರಣಗೊಂಡಿದೆ. ಇಂಥ ಗೂಂಡಾ ಸರ್ಕಾರದ ಕ್ರೌರ್ಯಕ್ಕೆ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಂದಿರ ಕಣ್ಣೀರಿನ ಶಾಪ ತಟ್ಟದೇ ಇರದು ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಬಿಎಸ್ ವೈ ಮಾತ್ರವಲ್ಲದೇ ಬಿಜೆಪಿ ಮುಖಂಡ ಸಿಟಿರವಿ ಕೂಡ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯ ಲಾಭಕ್ಕಾಗಿ ಹೆಣ ಉರುಳಿಸುವುದು ಮತ್ತು ಹೆಣವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ವಿದ್ಯೆ ಕೋಮುವಾದಿ ಕಾಂಗ್ರೆಸ್ ಪಕ್ಷಕ್ಕೆ ಕರಗತವಾಗಿದೆ. ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆಯ ವಿಚಾರದಲ್ಲಿ ಗೃಹ ಮಂತ್ರಿ ರಾಮಲಿಂಗಾ ರೆಡ್ಡಿ ನಾಲಿಗೆಯ ಹಿಡಿತವಿಲ್ಲದೆ ಮಾತನಾಡುತ್ತಿರುವುದು ಅವರ ತಾಲಿಬಾನ್ ಮನಸ್ತಿತಿಯನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.