ಬೆಂಗಳೂರು: ಭಾರತದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಉದ್ಯಮ ಸರಳೀಕರಣ (ease of business) ಬಗ್ಗೆ ಚಿಂತಿಸುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸರಣಿ ಹತ್ಯೆಗಳ (ease of Murder) ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಫೆ.04 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನ ಆಡಳಿತದಲ್ಲಿ ಕರ್ನಾಟಕ ಅಪರಾಧಿಗಳ ರಾಜ್ಯವಾಗಿ ಮಾರ್ಪಾಡಾಗಿದೆ.
ವಿರೋಧಿಗಳನ್ನು ವಿರೋಧಿಸಲು ಜೀವಗಳ ಬೆಲೆ ತೆರುವಂತಾಗುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಸಂಕೇತ, ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆದಿರುವುದು ಸಮಾಜದಲ್ಲಿ ಗಂಭೀರ ನೋವನ್ನುಂಟು ಮಾಡಿದೆ, ಈ ನೋವಿಗೆ ವೋಟಿನಿಂದ ಉತ್ತರ ನೀಡಬೇಕಿದೆ ಎಂದು ಮೋದಿ ಹೇಳಿದ್ದಾರೆ
ಕರ್ನಾಟಕದ ಜನತೆ ಶ್ರಮ ಜೀವಿಗಳು, ಭಾರತಕ್ಕಾಗಿ ಹಲವು ಕೊಡುಗೆಗಳನ್ನು ನೀಡಿದ್ದಾರೆ, ನಿನ್ನೆಯಷ್ಟೆ ವಿಶ್ವಕಪ್ ಗೆದ್ದಿರುವ ಭಾರತದ ಅಂಡರ್-19 ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಕನ್ನಡಿಗರು ಅಂತಹ ಅನೇಕರು ಭಾರತಕ್ಕಾಗಿ ಕೊಡುಗೆ ನೀಡಿದ್ದಾರೆ, ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಶ್ರಮಕ್ಕೆ ತಣ್ಣೀರೆರೆಚುತ್ತಿದೆ. ಪ್ರತಿಯೊಂದು ಯೋಜನೆಯಲ್ಲಿಯೂ ಭ್ರಷ್ಟಾಚಾರ ನಡೆಸಿ, ಕಮಿಷನ್ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರ 10% ಸರ್ಕಾರ ಎಂದೇ ಖ್ಯಾತಿ ಗಳಿಸಿದೆ ಎಂದು ಮೋದಿ ಆರೋಪಿಸಿದ್ದಾರೆ.
ಕೋಟಿಗಟ್ಟಲೆ ಹಣ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಸ್ಟೀಲ್ ಬ್ರಿಡ್ಜ್ ಷಡ್ಯಂತ್ರ ರೂಪಿಸಿತ್ತು, ಆದರೆ ರಾಜ್ಯದ ಜನತೆ ಹಾಗೂ ಪ್ರತಿಪಕ್ಷದ ಒತ್ತಡಕ್ಕೆ ಮಣಿದು ಹಿಂದೆ ಸರಿಯಿತು, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಮಂಜೂರು ಮಾಡಲಾಗಿದ್ದ 247ಕೋಟಿ ರೂಪಾಯಿ ಪೈಕಿ ರಾಜ್ಯ ಸರ್ಕಾರ 70 ಕೋಟಿಯಷ್ಟು ಹಣವನ್ನು ಖರ್ಚು ಮಾಡಿಲ್ಲ, ಸ್ಮಾರ್ಟ್ ಸಿಟಿ ಯೋಜನೆಗಾಗಿ 836 ಕೋಟಿ ಅನುದಾನ ನೀಡಲಾಗಿದ್ದು 143 ಕೋಟಿ ಯಷ್ಟು ಕಾಮಗಾರಿ ಆರಂಭವಾಗಿದೆಯಷ್ಟೇ, ಕೃಷಿ, ಶೌಚಾಲಯ, ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಯಾವುದರಲ್ಲಿಯೂ ರಾಜ್ಯ ಸರ್ಕಾರಕ್ಕೆ ಕಾಳಜಿ, ಬದ್ಧತೆ ಇಲ್ಲ ಇನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಖರ್ಚು ಮಾಡಿರುವ ದಕ್ಷಿಣ ಭಾರತದ ರಾಜ್ಯ ಕರ್ನಾಟಕವಾಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos