ಗರದ ಪುರಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ 
ರಾಜಕೀಯ

ಅಧಿಕಾರಕ್ಕೆ ಬಂದರೆ ಆಟೋ ಚಾಲಕರಿಗೆ ಎಂಎಲ್'ಸಿ ಸ್ಥಾನ: ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ 1 ತಿಂಗಳಲ್ಲಿ ಆಟೋ ಚಾಲಕರೊಬ್ಬರನ್ನು ಎಂಎಲ್'ಸಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಬುಧವಾರ ಭರವಸೆ ನೀಡಿದ್ದಾರೆ...

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ 1 ತಿಂಗಳಲ್ಲಿ ಆಟೋ ಚಾಲಕರೊಬ್ಬರನ್ನು ಎಂಎಲ್'ಸಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಬುಧವಾರ ಭರವಸೆ ನೀಡಿದ್ದಾರೆ. 
ನಿನ್ನೆ ನಗರದ ಪುರಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಚಾಲಕರೊಬ್ಬರ ಪ್ರಶ್ನೆಗೆ ಉತ್ತರಿಸಿ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರ್ತಿಸಿ ವಿಧಾನಪರಿಷತ್'ಗೆ ನಾಮನಿರ್ದೇಶನ ಮಾಡಲಾಗುತ್ತದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಸಿನಿಮಾ ಕ್ಷೇತ್ರದ ಬದಲಿಗೆ ಚಾಲಕರೊಬ್ಬರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು. 
ಆಟೋ, ಟ್ಯಾಕ್ಸಿ, ಲಾರಿ ಚಾಲಕರ ಸಂಘಗಳು ಸೇರಿ ಸರ್ವಾನುಮತದಿಂದ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ವಿಧಾನಸೌಧದಲ್ಲಿ ಆತ ಚಾಲಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮುಂಡೂಡುವಂತಹ ವ್ಯಕ್ತಿಯಾಗಿರಬೇಕು. ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ಚಾಲಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವಂತಹವರಾಗಿರಬೇಕು. ಅಂತಹ ವ್ಯಕ್ತಿಯನ್ನು ತಮಗೆ ತಿಳಿಸಿದರೆ ಆತನನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. 
ಜೂನ್ ತಿಂಗಳಿನಲ್ಲಿ 3 ನಾಮನಿರ್ದೇಶನ ಸ್ಥಾನಗಳು ಖಾಲಿಯಾಗಲಿದ್ದು, ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಷ್ಟರ ವೇಳೆಗೆ ಸೂಕ್ತ ವ್ಯಕ್ತಿಯನ್ನು ಚಾಲಕರ ಸಂಘಗಳೇ ಆಯ್ಕೆ ಮಾಡಿ ನನಗೆ ಹೇಳಬೇಕು. ಒಂದು ಸ್ಥಾನಕ್ಕೆ ಸಿನಿಮಾ ಕ್ಷೇತ್ರದವರ ಬದಲಿಗೆ ಚಾಲಕರೊಬ್ಬರನ್ನು ಆಯ್ಕೆ ಮಾಡಲಾಗುವುದು. ಚಾಲಕರಾಗಿ ಸೇವೆ ಸಲ್ಲಿಸಿ ಅನುಭವ ಇದ್ದು, ಸಮಸ್ಯೆಗಳ ಒಳಸುಳಿವು ತಿಳಿದಿರುವಂತಹ ವ್ಯಕ್ತಿಯನ್ನು ಗುರ್ತಿಸಿ ಎಂದು ಸಲಹೆ ನೀಡಿದರು. 
ಆಟೋಗಳಿಗೆ ಪ್ರತ್ಯೇಕ ಆ್ಯಪ್'ಗೆ ಚಿಂತನೆ
ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಆಟೋಗಳಿಗೂ ಓಲಾ ಮತ್ತು ಉಬರ್ ನಂತೆಯೇ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲು ಚಿಂತನೆಗಳನ್ನು ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. 
ನಾನು ಈ ಹಿಂದೆಯೇ ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಇಂದು ನಾನು ಸತ್ತರೂ ನನ್ನನ್ನು ಮಾಜಿ ಮುಖ್ಯಮಂತ್ರಿ ಎಂದೇ ಹೇಳುತ್ತಾರೆ. ಆದರೆ, ಜನರಿಗೆ ಸೇವೆ ಸಲ್ಲಿಸಲು ನಾನು ಮತ್ತೆ ಅಧಿಕಾರಕ್ಕೆ ಬರಬೇಕು. ಪ್ರಮುಖವಾಗಿ ಬಡವರಿಗಾಗಿ. ಅಧಿಕಾರಿಗಳಿಂದ ಸರ್ಕಾರ ನಡೆಯುವುದು ನನಗೆ ಬೇಡ. ಸಾಮಾನ್ಯರಿಗಾಗಿ ಸರ್ಕಾರ ನಡೆಯಬೇಕು. ಇದಕ್ಕೆ ನನಗೆ ನಿಮ್ಮ ಬೆಂಬಲ ಬೇಕು ಎಂದು ಆಟೋ ಚಾಲಕರ ಬಳಿ ಮನವಿ ಮಾಡಿಕೊಂಡಿದ್ದಾರೆ. 
ಜೆಡಿಎಸ್ ನಲ್ಲಿ ಯಾವುದೇ ಸ್ಟಾರ್ ಪ್ರಚಾರಕರಿಲ್ಲ. ಒಂದು ವೇಳೆ ಇರುವುದೇ ಆದರೆ, ಅದು ನಾನು ಮತ್ತು ದೇವೇಗೌಡ ಅವರು ಎಂದಿದ್ದಾರೆ. 
ಇದೇ ವೇಳೆ ಆಟೋ ಚಾಲಕರಿಗಾಗಿ ಯಾವುದೇ ಯೋಜನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ರಾಜ್ಯ ಸರ್ಕಾರ ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವ ಹಣವನ್ನು ಆಟೋ ಚಾಲಕರ ಸಾಲ ಮನ್ನಾ ಮಾಡಲು ಬಳಸಬಹುದಿತ್ತು ಎಂದು ತಿಳಿಸಿದ್ದಾರೆ. 
ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಪೋಷಕರೊಬ್ಬರು ತಮ್ಮ ಸಂಕಷ್ಟ ಮತ್ತು ತಮಗೆ ದೊರಕಿದ ಆರ್ಥಿಕ ಸಹಾಯದ ಕುರಿತು ವಿವರಿಸುತ್ತಿದ್ದ ವೇಳೆ ಭಾವೋದ್ವೇಗಕ್ಕೊಳಗಾದ ಕುಮಾರಸ್ವಾಮಿ ಅವರು ಕಣ್ಣೀರ ಹಾಕಿದ ಪ್ರಸಂಗ ಕೂಡ ನಡೆಯಿತು. 
ಹೊಸಕೋಟೆ ಮೂಲದ ದಂಪತಿ ನಗರದ ವೈಟ್ ಫೀಲ್ಡ್ ನಲ್ಲಿ ನೆಲೆಸಿದ್ದು, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಮಗುವಿಗೆ ಶಕ್ತಿಹೀನತೆಗೆ ಸಂಬಂಧಪಟ್ಟಂತಹ ತೀವ್ರತರ ಕಾಯಿಲೆ ಇದ್ದು, ಯಾರಿಂದರೂ ನೆರವಿನ ಭರವಸೆ ಸಿಗದಿದ್ದಾಗ ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಕೈಗೊಂಡಿದ್ದವೆವು. ಆದರೆ, ಕೊನೆಗೆ ಕುಮಾರಸ್ವಾಮಿ ಆರ್ಥಿಕ ನೆರವು ನೀಡಿ ಮಗುವಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದರು. ಈ ಘಟನೆಯನ್ನು ದಂಪತಿ ವೇದಿಕೆಯಲ್ಲಿ ವಿವರಿಸಿದರು. ದಂಪತಿಯ ಸಮಸ್ಯೆಯನ್ನು ಕೇಳುತ್ತಿದ್ದ ಕುಮಾರಸ್ವಾಮಿಯವರು ಭಾವೋದ್ವೇಗಕ್ಕೊಳಕ್ಕಾಗಿ ಕಣ್ಣೀರಿಟ್ಟು ಪಕ್ಕದಲ್ಲಿಯೇ ಇದ್ದ ಮಗುವನ್ನು ಸಂತೈಸಿದರು. 
ಬಳಿಕ ಮಾತನಾಡಿದ ಕುಮಾರಸ್ವಾಮಿಯವರು ಇದು ನನ್ನ ಎರಡನೇ ಜನ್ಮ. ನನ್ನ ಜೀವನವನ್ನು ಬಡವರಿಗೆ ಮುಡಿಪಾಗಿರಿಸಲು ಇಚ್ಛಿಸುತ್ತೇನೆ. ಎಲ್ಲಾ ಆಟೋ ಚಾಲಕರು ಹಾಗೂ ಅವರ ಕುಟುಂಬಸ್ಥರು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 
7ನೇ ತರಗತಿ ಉತ್ತೀರ್ಣರಾಗಿರುವ ಆಟೋ ಚಾಲಕರಿಗೆ ಕೌಶಲ್ಯ ತರಬೇತಿಗಾಗಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಮಾಗಡಿ ಮತ್ತು ಸುಂಕದಕಟ್ಟೆಯಲ್ಲಿ ಮಧ್ಯೆ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT