ಮುಂಬೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚಿಕನ್ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆ ದುರ್ಬಲ ಬಿಜೆಪಿಯ ಅಸ್ವಸ್ಥ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತ್ ನಲ್ಲಿ ಬಿಜೆಪಿ ನಾಯಕ ನಿದ್ದೆಗೇಡಿಸಿದ್ದರು. ಈಗ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಮರುಕಳುಹಿಸುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಗುಜರಾತ್ ನಲ್ಲಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.
ಒಂದು ವೇಳೆ ಕಾಂಗ್ರೆಸ್ ಹಿಂದೂತ್ವವಾದ ಅಳವಡಿಸಿಕೊಂಡರೆ ತಮಗೆ ಹಿನ್ನಡೆಯಾಗಬಹುದು ಎಂಬ ಆತಂಕದಿಂದ ಬಿಜೆಪಿ ರಾಹುಲ್ ಗಾಂಧಿ ದೇವಸ್ಥಾನ ಭೇಟಿಯನ್ನು ಕಟುವಾಗಿ ಟೀಕಿಸುತ್ತಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ವಿವರಿಸಲಾಗಿದೆ.
ಕಾಂಗ್ರೆಸ್ ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಅನುಸರಿಸಿದ ಮೃತ ಹಿಂದೂತ್ವವನ್ನೇ ಮುಂಬರುವ ಕರ್ನಾಟಕ ವಿಧಾನಸಭೆ ಚುವಾವಣೆಯಲ್ಲಿ ಅನುಸರಿಸುವ ಮೂಲಕ ಬಿಜೆಪಿಯನ್ನು ಎದುರಿಸಲಿದೆ ಎಂದು ಸಾಮ್ನಾ ಸಂಪಾದಕೀಯ ತಿಳಿಸಿದೆ.