ಬೆಂಗಳೂರು: ರಾಜ್ಯ ಸರ್ಕಾರ ಶನಿವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಮಹದಾಯಿ ವಿವಾದ ಇತ್ಯಾರ್ಥಕ್ಕೆ ಸಂಬಂಧಿಸಿದೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ ಸುಮಾರು ಮೂರು ಗಂಟೆಗಳ ಕಾಲ ಸರ್ವಪಕ್ಷ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಹದಾಯಿ ನದಿ ನೀರಿನ ವಿವಾದ ಬಗೆಹರಿಸುವ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಲು ನಾನು ಈಗಲೂ ಸಿದ್ಧ. ಆದರೆ ನನ್ನ ಪತ್ರಕ್ಕೆ ಮೊದಲು ಗೋವಾ ಮುಖ್ಯಮಂತ್ರಿಯವರು ಉತ್ತರ ಕೊಡಲಿ. ಅವರು ಸಭೆ ಕರೆದರೆ, ಮಾತುಕತೆಗೆ ಸಿದ್ಧ ಎಂದರೆ, ನಾನು ಗೋವಾ ಕಾಂಗ್ರೆಸ್ಸಿಗರ ಜೊತೆ ಮಾತನಾಡುತ್ತೇನೆ ಎಂದರು.
ಮಹದಾಯಿ ವಿಚಾರದಲ್ಲಿ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಪ್ರಧಾನಿಯವರ ಬಳಿಗೆ ನಿಯೋಗ ಹೋಗೋಣ, ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ, ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಅವರಲ್ಲಿ ಮನವಿ ಮಾಡೋಣ ಎಂದರೆ ಬಿಜೆಪಿಯವರು ಒಪ್ಪುತ್ತಿಲ್ಲ ಎಂದು ಸಿಎಂ ಆರೋಪಿಸಿದರು.
ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲು ಒಪ್ಪಿಕೊಳ್ಳುವುದಾದರೆ ನಾನು ಮತ್ತೊಮ್ಮೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಿದ್ಧ. ಅಲ್ಲದೆ ಸ್ವ ಪ್ರತಿಷ್ಠೆ ಬದಿಗೊತ್ತಿ ಗೋವಾ ಮುಖ್ಯಮಂತ್ರಿಯವರೊಂದಿಗೆ ಮಾತನಾಡಲು ನಾನು ತಯಾರಿದ್ದೇನೆ. ನಮಗೆ ಪ್ರತಿಷ್ಠೆಗಿಂತ ರಾಜ್ಯದ ರೈತರ ಹಿತ ಮುಖ್ಯ ಎಂದರು.
ಮಹದಾಯಿ ವಿಚಾರದ ಬಗ್ಗೆ ಚರ್ಚಿಸಲು ಸರ್ವಪಕ್ಷ ಮುಖಂಡರು ಹಾಗೂ ರೈತ ಮುಖಂಡರೊಂದಿಗೆ ಬರುತ್ತೇವೆ. ಸಮಯ ಕೊಡಿ ಎಂದು ಪ್ರಧಾನಿಯವರಿಗೆ ಪತ್ರ ಬರೆಯುತ್ತೇನೆ. ಸರ್ವಪಕ್ಷ ನಿಯೋಗದಲ್ಲಿ ಬಿಜೆಪಿ ನಾಯಕರೂ ಬರಲಿ. ವಿವಾದ ಬಗೆಹರಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics