ರಾಜಕೀಯ

ಬಜೆಟ್ ನಲ್ಲಿ ಕರಾವಳಿ ಜಿಲ್ಲೆ ನಿರ್ಲಕ್ಷ್ಯ: ಶಾಸಕರಿಂದ ವಿಧಾನಸೌಧ ಎದುರು ಪ್ರತಿಭಟನೆ

Sumana Upadhyaya

ಬೆಂಗಳೂರು: ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕರಾವಳಿ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿಯ ಜನಪ್ರತಿನಿಧಿಗಳು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಶಾಸಕರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗೆ ಯಾವುದೇ ಅನುದಾನ ಮತ್ತು ಘೋಷಣೆ ಮಾಡಿಲ್ಲ. ಹಲವು ಸಂಪನ್ಮೂಲ ಮತ್ತು ಪವಿತ್ರ ಕ್ಷೇತ್ರಗಳನ್ನು ಒಳಗೊಂಡು ರಾಜ್ಯಕ್ಕೆ ಆದಾಯ ತರುವ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಈ ಸರ್ಕಾರದ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಇಡೀ ರಾಜ್ಯಕ್ಕೆ ತಾಯಿಯ ಸ್ಥಾನದಲ್ಲಿ ನಿಲ್ಲಬೇಕಾದ ಸರ್ಕಾರ ನಿನ್ನೆಯ ಬಜೆಟ್ ನಲ್ಲಿ ಕರಾವಳಿ ಸೇರಿದಂತೆ ಆರೇಳು ಜಿಲ್ಲೆಗಳಿಗೆ ಮಲತಾಯಿ ಧೋರಣೆ ತಳೆದಿದೆ. ಕರಾವಳಿಯ ಜೀವನಾಡಿಯಾಗಿರುವ ಮೀನುಗಾರಿಕೆಗೆ ಅನುದಾನ ನೀಡದಿದ್ದ ಮೇಲೆ ಆ ಇಲಾಖೆ ಏಕಿದೆ, ಅದನ್ನು ರದ್ದುಪಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್ ನಲ್ಲಿ ಕರಾವಳಿ ಜಿಲ್ಲೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದರಿಂದ ಈಗಾಗಲೇ ನಿರ್ಧಾರ ಮಾಡಿರುವ ಹಲವು ಯೋಜನೆಗಳನ್ನು ಕೈಬಿಡುವ ಅನುಮಾನ ಕಾಡುತ್ತಿದೆ. ರೈತರ ಸಾಲಮನ್ನಾ ಎಂದು ಸಾಮಾನ್ಯ ಜನರು ಬಳಸುವ ವಿದ್ಯುತ್, ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಹಾಗಾದರೆ ಇದು ಜನಪರ ಸರ್ಕಾರವೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರದ ಬಜೆಟ್ ನೋಡಿದರೆ ಕೇವಲ ಜೆಡಿಎಸ್ ಶಾಸಕರು ಪ್ರತಿನಿಧಿಸುವ ಜಿಲ್ಲೆಗಳಿಗೆ ಮಾತ್ರ ಹೆಚ್ಚು ಅನುದಾನ, ಯೋಜನೆಗಳನ್ನು ಬಿಡುಗಡೆ ಮಾಡಿದಂತಿದೆ. ಹೀಗಾಗಿ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ವಿಧಾನಮಂಡಲದ ಎರಡೂ ಸದನಗಳಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನಿಲ್ ಕುಮಾರ್ ಕಾರ್ಕಳ, ಬಜೆಟ್ ನಲ್ಲಿ ಕರಾವಳಿ, ಮಲೆನಾಡು ಭಾಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಗಮನಿಸಿದರೆ ಕಳೆದ ಚುನಾವಣೆಯಲ್ಲಿ ಈ ಭಾಗದ ಜನರು ಮತ ನೀಡಲಿಲ್ಲ ಎಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಸರ್ಕಾರದ ಎರಡೂ ಪಕ್ಷಗಳು ನಿರ್ಧರಿಸಿದಂತಿದೆ. ಇದು ಖಂಡನೀಯ ಎಂದರು.

ಕರಾವಳಿ ಜಿಲ್ಲೆಯ ನದಿಗಳ ನೀರು ಇಂದು ಸಮುದ್ರ ಸೇರುತ್ತಿವೆ. ಅವುಗಳ ಹರಿಯುವಿಕೆಯ ದಿಕ್ಕನ್ನು ಬದಲಾಯಿಸಿ ಜಿಲ್ಲೆಗೆ ಸಾಕಷ್ಟು ನೀರೊದಗಿಸುವ ಕೆಲಸ ಆಗಬೇಕಿದೆ. ಇನ್ನೊಂದೆಡೆ ಕರಾವಳಿ ಜಿಲ್ಲೆಯ ದೇವಾಲಯಗಳ ಮೂಲಕ ಟೆಂಪಲ್ ಟೂರಿಸಂ ಪರಿಕಲ್ಪನೆಯನ್ನು ಸರ್ಕಾರ ವೃದ್ಧಿಸಬಹುದು. ಈ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಬಹುದಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

SCROLL FOR NEXT