ರಾಜಕೀಯ

ಹಂಗಾಮಿ ಸಭಾಪತಿಯ ನಿರ್ಧಾರಗಳ ಮಾನ್ಯತೆ ಕುರಿತು ಮೇಲ್ಮನೆಯಲ್ಲಿ ಪ್ರಶ್ನೆ: ಬಸವರಾಜ್ ಹೊರಟ್ಟಿ ರಾಜೀನಾಮೆ ಬೆದರಿಕೆ

Sumana Upadhyaya

ಬೆಂಗಳೂರು: ವಿಧಾನಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾಯಂ ಸಭಾಪತಿ ರೀತಿಯಲ್ಲಿ ಸದನದ ಎಲ್ಲಾ ನಡಾವಳಿಗಳನ್ನು ಮುಂದುವರಿಸುವ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾನೂನು ಮಾನ್ಯತೆಯ ಬಗ್ಗೆ ನಿನ್ನೆ ವಿಧಾನಪರಿಷತ್ ನಲ್ಲಿ ಸುದೀರ್ಘ ಚರ್ಚೆ ನಡೆಯಿತು. ಇಡೀ ದಿನದ ಕಲಾಪದಲ್ಲಿ ಅರ್ಧ ದಿನದ ಕಲಾಪ ಇದರ ಚರ್ಚೆಯಲ್ಲಿಯೇ ಸಾಗಿತು. ಈ ಸುದೀರ್ಘ ಚರ್ಚೆಯಿಂದಾಗಿ ಹಂಗಾಮಿ ಸ್ಪೀಕರ್ ಬಸವರಾಜ್ ಹೊರಟ್ಟಿ ನಂತರ ಸುದ್ದಿಗೋಷ್ಠಿ ನಡೆಸಿ ತಮ್ಮ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.

ಬಜೆಟ್ ಅಧಿವೇಶನ ಮುಗಿಯುವುದಕ್ಕೆ ಮೊದಲು ಸಭಾಪತಿ ಹುದ್ದೆಗೆ ಚುನಾವಣೆ ನಡೆಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ವಿಚಾರವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಆರೋಪಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದ ಪ್ರಸಂಗ ಕೂಡ ನಿನ್ನೆ ಮೇಲ್ಮನೆ ಕಲಾಪದಲ್ಲಿ ನಡೆಯಿತು.

ನಿನ್ನೆ ಬೆಳಗ್ಗೆ ವಿಧಾನಪರಿಷತ್ ಕಲಾಪ ಆರಂಭವಾದ ಕೂಡಲೇ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತೆಗೆದುಕೊಳ್ಳುವ ನಿರ್ಧಾರಗಳ ಕಾನೂನು ಮಾನ್ಯತೆ ಬಗ್ಗೆ ಪ್ರಶ್ನಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್ ಗೆ ಅನುಮೋದನೆ ನೀಡುವ ಅಧಿಕಾರ ಅವರಿಗಿದೆಯೇ ಎಂದು ಕೇಳಿದರು. ಸಭಾಪತಿಗಳ ಚುನಾವಣೆ ನಡೆಯದಿರುವುದರಿಂದ ಉಪ ಸಭಾಪತಿಗಳ ಗೈರಿನಲ್ಲಿ ಹಂಗಾಮಿ ಸಭಾಪತಿಗಳು ತೆಗೆದುಕೊಳ್ಳುವ ನಿರ್ಧಾರಗಳು ಅಕ್ರಮವಾಗುತ್ತದೆ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಹಂಗಾಮಿ ಸ್ಪೀಕರ್ ನೇಮಕವನ್ನು ಭಾರತೀಯ ಸಂವಿಧಾನದ ಅನುಚ್ಛೇದ 184ರಡಿ ಮಾಡಲಾಗಿದ್ದು ಅವರು ಆಯ್ಕೆಯಾದ ಸಭಾಪತಿಗಳ ಅಧಿಕಾರವನ್ನೆಲ್ಲವನ್ನು ಹೊಂದಿರುತ್ತಾರೆ ಎಂದರು.

ಈ ಮಧ್ಯೆ ಆಡಳಿತ ಪಕ್ಷಗಳು ಮತ್ತು ಪ್ರತಿಪಕ್ಷದ ನಡುವೆ ತೀವ್ರ ವಾಗ್ವಾದ ನಡೆಯುವುದನ್ನು ಕಂಡು ಕೋಪಗೊಂಡ ಹೊರಟ್ಟಿ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದರು. ತಾವು ಸೆಕೆಂಡುಗಳಲ್ಲಿಯೇ ಸದನದ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದಾಗಿದೆ. ಆದರೆ ಸರ್ಕಾರದ ಕಾನೂನು ಪಾವಿತ್ರ್ಯತೆಯನ್ನು ಪರಿಗಣಿಸಿ ರಾಜೀನಾಮೆ ನೀಡುವುದಕ್ಕೆ ಹೋಗುವುದಿಲ್ಲ ಎಂದು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಕೃಷ್ಣ ಭೈರೇಗೌಡ, ಸಭಾಪತಿ ಸ್ಥಾನಕ್ಕೆ ಯಾವಾಗ ಚುನಾವಣೆ ನಡೆಸುವುದು ಎಂದು ತಿಳಿಸಿ ಎಂದರು.

ಸದನ ಮತ್ತೆ ಸೇರಿದಾಗ ಕೃಷ್ಣ ಭೈರೇಗೌಡ ಮತ್ತೆ ಮಾತನಾಡಿ ಹಂಗಾಮಿ ಸಭಾಪತಿಗಳ ಸ್ಥಾನ ಸಾಂವಿಧಾನಿಕ ಹುದ್ದೆಯಾಗಿದ್ದು ಈ ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಸಭಾಪತಿಗಳನ್ನು ಸರ್ಕಾರ ಆಯ್ಕೆ ಮಾಡಲಿದೆ ಎಂದರು. ಇದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚುನಾವಣೆಗೆ ಅಧಿಸೂಚನೆ ಹೊರಡಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಇದರಿಂದ ಅನಗತ್ಯ ವಿವಾದ ಉಂಟಾಗುತ್ತಿದೆ ಎಂದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್ ಹೊರಟ್ಟಿಯವರು ರಾಜ್ಯ ಸಚಿವ ಸಂಪುಟದಲ್ಲಿ ಜೆಡಿಎಸ್ ನ ವಿಧಾನಪರಿಷತ್ ಸದಸ್ಯರ ಸೇರ್ಪಡೆ ಮಾಡದಿರುವ ಪಕ್ಷದ ನಿರ್ಣಯವನ್ನು ಟೀಕಿಸಿದ್ದಾರೆ. ಇದು ಪಕ್ಷದ ನಾಯಕರ ತಪ್ಪು ನಿರ್ಧಾರವಾಗಿದೆ. ಕೇಂದ್ರ ಸರ್ಕಾರದಲ್ಲಿ ಹಲವು ರಾಜ್ಯಸಭಾ ಸದಸ್ಯರು ಸಚಿವರಾಗಿದ್ದಾರೆ ಎಂದರು. ವಿಧಾನಪರಿಷತ್ ಸಭಾಪತಿಗಳ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ ಎಂದು ಕೇಳಿದಾಗ ಪಕ್ಷದ ನಾಯಕರ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ಹೇಳಿದರು.

SCROLL FOR NEXT