ರಾಜಕೀಯ

ಸಚಿವರ, ಅಧಿಕಾರಿಗಳ ಸತತ ಗೈರು; ಸಿಟ್ಟುಗೊಂಡ ಸಭಾಪತಿ ಬಸವರಾಜ್ ಹೊರಟ್ಟಿ

Sumana Upadhyaya

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ನಡೆದ ಕಲಾಪ ವೇಳೆ ಸಚಿವರು ಮತ್ತು ಅಧಿಕಾರಿಗಳ ಗೈರು ಕಂಡುಬಂದು ಅಸಮಾಧಾನ ಹೊರಹಾಕಿದ ಸಭಾಪತಿ ಬಸವರಾಜ್ ಹೊರಟ್ಟಿ, ಕಲಾಪಕ್ಕೆ ಬಾರದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಪ್ರಸಂಗ ನಿನ್ನೆ ನಡೆಯಿತು.

ಸರ್ಕಾರದ ಅಧಿಕಾರಿಗಳು ಸದನದ ಕಲಾಪಕ್ಕೆ ಉಚಿತವಾಗಿ ಬರುವುದಿಲ್ಲ. ಅವರಿಗೆ ಹಣ ಕೊಡಲಾಗುತ್ತದೆ. ಆದರೂ ಕಲಾಪದ ಸಂದರ್ಭದಲ್ಲಿ ಬಾರದಿರುವುದು ಖಂಡನೀಯ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಳಿ ಮಾತನಾಡಿ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಬೇಕೆಂದು ಹೇಳುತ್ತೇನೆ. ಕಳೆದ ಶುಕ್ರವಾರ ಕೂಡ ಸಭಾಪತಿ ಹೊರಟ್ಟಿಯವರು ಗೈರಾಗಿರುವ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಕಲಾಪಕ್ಕೆ ಬಾರದಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ತಾವು ಏನು ಬೇಕಾದರೂ ಮಾಡಬಹುದು ಎಂದು ಅಧಿಕಾರಿಗಳು ಭಾವಿಸಿದರೆ ನಾವು ಕಲಾಪ ಏಕೆ ನಡೆಸಬೇಕು ಎಂದು ಹೊರಟ್ಟಿ ಪ್ರಶ್ನಿಸಿದರು.

ನಿನ್ನೆ ಬೆಳಗಿನ ಕಲಾಪದಲ್ಲಿ ಹಲವು ಸಚಿವರು ಸದನದಲ್ಲಿ ಹಾಜರಿದ್ದು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಡಾ ಜಿ ಪರಮೇಶ್ವರ್, ಜಿ ಟಿ ದೇವೇಗೌಡ, ಪ್ರಿಯಾಂಕ್ ಖರ್ಗೆ, ಸಾ ರಾ ಮಹೇಶ್, ಎನ್ ಎಚ್ ಶಿವಶಂಕರ ರೆಡ್ಡಿ ಮತ್ತು ಸಿ ಎಸ್ ಪುಟ್ಟರಾಜು ಇವರಲ್ಲಿ ಮೂವರು ಮಾತ್ರ ಬೆಳಗಿನ ಕಲಾಪದ ವೇಳೆ ಹಾಜರಿದ್ದರು.

ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಥ್, ಜಲಸಂಪನ್ಮೂಲ ಇಲಾಖೆಯ ಬಿ ಜಿ ಗುರುಪಾದಸ್ವಾಮಿ, ಸಾರಿಗೆ ಇಲಾಖೆಯ ಬಿ ಬಸವರಾಜು, ಕಾನೂನು ಇಲಾಖೆಯ ಎನ್ ಸಿ ಶ್ರೀನಿವಾಸ್ ಸದನದಲ್ಲಿ ಹಾಜರಿರಬೇಕಾಗಿದ್ದ ಅಧಿಕಾರಿಗಳಾಗಿದ್ದರು. ಸಭಾಪತಿಗಳ ಎಚ್ಚರಿಕೆ ನಂತರ ಮುಖ್ಯ ಕಾರ್ಯದರ್ಶಿಗಳು ಸದನದ ಕಲಾಪದ ವೇಳೆ ಕೆಲ ಹೊತ್ತು ಹಾಜರಿದ್ದರು.

SCROLL FOR NEXT