ರಾಜಕೀಯ

ರೈತರ ಸಾಲಮನ್ನಾಗೆ ಕುಮಾರಸ್ವಾಮಿ ಹಣ ಎಲ್ಲಿಂದ ತರುತ್ತಾರೆ?; ವಿರೋಧ ಪಕ್ಷದ ಪ್ರಶ್ನೆಗೆ ಸರ್ಕಾರದಿಂದ ಸಿಕ್ಕಿಲ್ಲ ಉತ್ತರ

Sumana Upadhyaya

ಬೆಂಗಳೂರು: ರೈತರಿಗೆ ಸಾಲಮನ್ನಾ ಮಾಡುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಎಲ್ಲಿಂದ ಹಣ ತರುತ್ತದೆ, ಸಾಲಮನ್ನಾಗೆ ಹಣ ಯಾವ ರೀತಿ ಕ್ರೋಢೀಕರಿಸಲಿದೆ ಎಂಬ ಬಗ್ಗೆ ಸರ್ಕಾರದಿಂದ ಸಾಮಾನ್ಯ ಜನತೆ ಸೇರಿದಂತೆ ಪ್ರತಿಪಕ್ಷಗಳೂ ಉತ್ತರ  ಬಯಸುತ್ತಿವೆ.

ಈ ಬಗ್ಗೆ ಮುಖ್ಯಮಂತ್ರಿ ಸದನದಲ್ಲಿ ಇದುವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಸರ್ಕಾರ 34 ಸಾವಿರ ಕೋಟಿ ರೂಪಾಯಿ ರೈತ ಸಾಲಮನ್ನಾ ಹೇಗೆ ಮಾಡುತ್ತದೆ ಎಂದು ಸಂಶಯ ವ್ಯಕ್ತಪಡಿಸುತ್ತಿರುವಾಗಲೇ, ಕುಮಾರಸ್ವಾಮಿಯವರು ನಿನ್ನೆ ಮತ್ತೆ ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿ ರೈತರ 2017ರ ಡಿಸೆಂಬರ್ 31ರವರೆಗೆ ಹೊಂದಿರುವ 1 ಲಕ್ಷ ರೂಪಾಯಿಗಳವರೆಗೆ ಚಾಲ್ತಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ರೈತರ ಸಾಲಮನ್ನಾ ಪ್ರಕ್ರಿಯೆ ಸುಗಮವಾಗಿ ನಡೆಯಲು ತಮ್ಮ ಸರ್ಕಾರ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದೆ ಎಂದ ಮುಖ್ಯಮಂತ್ರಿ ಹಣ ಎಲ್ಲಿಂದ ತರಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಲಿಲ್ಲ. ಸಾಲವನ್ನು ಸಂಪೂರ್ಣ ನೀಡದಿದ್ದರೆ ಬ್ಯಾಂಕುಗಳು ಸಾಲಮುಕ್ತ ಪ್ರಮಾಣಪತ್ರವನ್ನು ರೈತರಿಗೆ ಹೇಗೆ ನೀಡುತ್ತದೆ? ಆರ್ ಬಿಐ ಬ್ಯಾಂಕುಗಳಿಗೆ ಕಂತಿನ ರೂಪದಲ್ಲಿ ಹಣ ಪಡೆಯಲು ಅವಕಾಶ ನೀಡುತ್ತದೆಯೇ? ಇದು ಸಾಧ್ಯವಿಲ್ಲ ಎಂದು ಆರೋಪಿಸಿದ ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಕುಮಾರಸ್ವಾಮಿ ಸರ್ಕಾರ ರೈತರಿಗೆ ಮೋಸ ಹಾಗೂ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿಯವರು, ನಿಮಗೆ ಸಾಧ್ಯವಾಗದಿರುವುದು ನನಗೆ ಸಾಧ್ಯವಾಗುತ್ತದೆ ಎಂದರು.

ರೈತರ ಸಾಲಮನ್ನಾ ಮಾಡುವ ಬಗ್ಗೆ ಸರ್ಕಾರ ಬ್ಯಾಂಕಿನೊಂದಿಗೆ ಇದುವರೆಗೆ ಮೂರು ಬಾರಿ ಮಾತುಕತೆ ನಡೆಸಿದೆ. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಸುಮಾರು 10,528 ಕೋಟಿ ರೂಪಾಯಿಗಳಿವೆ. ರಾಜ್ಯದ ಬೊಕ್ಕಸಕ್ಕೆ ಹೊರೆಯಾಗದಂತೆ ಸಾಲಮನ್ನಾ ಮಾಡುವ ಬಗ್ಗೆ ಬ್ಯಾಂಕುಗಳು ಕೂಡ ಭರವಸೆ ನೀಡಿವೆ. ಇಂಧನ, ಅಬಕಾರಿ, ಸುಂಕ ಮತ್ತು ವಿದ್ಯುತ್ ದರಗಳ ಹೆಚ್ಚಳದಿಂದ ರಾಜ್ಯದ ಬೊಕ್ಕಸವನ್ನು ತುಂಬಿಸಲಾಗುತ್ತದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

ರೈತರ ಸಾಲಮನ್ನಾದಿಂದ ದಕ್ಷಿಣ ಕರ್ನಾಟಕ ಭಾಗದ ರೈತರಿಗೆ ಮಾತ್ರ ಅನುಕೂಲವಾಗುತ್ತದೆ ಎಂಬ ವಿರೋಧ ಪಕ್ಷದ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಳಗಾವಿ ಜಿಲ್ಲೆಗೆ 2,670 ಕೋಟಿ ರೂಪಾಯಿ ರೈತಸಾಲಮನ್ನಾವಾಗಲಿದೆ, ಆ ಜಿಲ್ಲೆಗೆ ಅತಿ ಹೆಚ್ಚಿನ ಉಪಯೋಗವಾಗಲಿದೆ ಎಂದರು. ಇದೇ ತಿಂಗಳು 24ಕ್ಕೆ ಬ್ಯಾಂಕ್ ನ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ ನಂತರ ಸಾಲಮನ್ನಾ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.

SCROLL FOR NEXT