ಬೆಂಗಳೂರು: ಸಿಎಂ ಕಣ್ಣೀರಧಾರೆಗೆ ಕರಗಿದ ಕಾಂಗ್ರೆಸ್, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾವನಾತ್ಮಕ ವ್ಯಕ್ತಿಯಾಗಿದ್ದು, ಅವರನ್ನು ಸಮರ್ಥಿಸಿಕೊಳ್ಳುವಂತೆ ತನ್ನ ವಕ್ತಾರರಿಗೆ ಮಂಗಳವಾರ ಸೂಚಿಸಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಅವರು ನಮ್ಮ ಮಿತ್ರರಾಗಿದ್ದು, ಮುಖ್ಯಮಂತ್ರಿಗಳನ್ನು ಮತ್ತು ಸರ್ಕಾರವನ್ನು ಸಮರ್ಥಿಸಿಕೊಳ್ಳುವಂತೆ ನಮ್ಮ ಪಕ್ಷದ ವಕ್ತಾರರಿಗೆ ಸೂಚಿಸಲಾಗಿದೆ. ಕೆಲ ವಿಚಾರಗಳನ್ನು ಜೆಡಿಎಸ್ ವಕ್ತಾರರಿಗೆ ಮಾತ್ರ ಬಿಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇಂದು ವಕ್ತಾರರ ಸಭೆ ನಡೆಸಿದ್ದು, ಸಭೆಯಲ್ಲಿ ಸಮ್ಮಿಶ್ರ ಸರ್ಕಾರವನ್ನು ಮತ್ತು ಮಿತ್ರ ಪಕ್ಷ ಜೆಡಿಎಸ್ ಅನ್ನು ಸಮರ್ಥಿಸಿಕೊಳ್ಳುವಂತೆ ಸೂಚಿಸಿರುವುದಾಗಿ ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಇತ್ತೀಚಿಗೆ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ನೂತನ ಸಚಿವರು ಮತ್ತು ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ತೀವ್ರ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟಿದ್ದರು. ಅಲ್ಲದೆ ಮುಖ್ಯಮಂತ್ರಿ ಹುದ್ದೆಯಲ್ಲಿ ನಾನು ಸಂತೋಷವಾಗಿಲ್ಲ. ನಾನು ವಿಷಕಂಠ ಎಂದೆಲ್ಲಾ ಹೇಳಿದ್ದರು. ಇದು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಇರಿಸುಮುರಿಸು ಉಂಟು ಮಾಡಿತ್ತು.