ರಾಜಕೀಯ

ಘನತೆ, ಗೌರವದಿಂದ ವರದಿ ಮಾಡಿ: ಮಾಧ್ಯಮಗಳ ವಿರುದ್ಧ ರೇವಣ್ಣ ಕಿಡಿ

Lingaraj Badiger
ಬೆಂಗಳೂರು: ಟಿವಿ ಮಾಧ್ಯಮಗಳು ಘನತೆ, ಗೌರವ ಕಾಪಾಡಿಕೊಂಡು ವರದಿಗಳನ್ನು ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಎಚ್​ ಡಿ ರೇವಣ್ಣ ಅವರು ಸೋಮವಾರ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೇವಣ್ಣ, ನಾನು ಬೇರೆ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹಸ್ತಕ್ಷೇಪ ಮಾಡುವುದಕ್ಕೆ ನನಗೆೇನೂ ಹುಚ್ಚು ಡಿದಿದೆಯೇ? ಎಂದು ಪ್ರಶ್ನಿಸಿದರು.
ಬೇರೆ ಇಲಾಖೆಗಳಲ್ಲಿ ನಾನೇಕೆ ಹಸ್ತಕ್ಷೇಪ ಮಾಡಲಿ, ನಾನ್ಯಾಕೆ ನನ್ನ ಇಲಾಖೆ ಬಿಟ್ಟು ಬೇರೆ ಕಡೆ ತಲೆ ಹಾಕಲಿ? ಮುಜರಾಯಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ, ಆ ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದೀರಿ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ.
ಈ ಹಿಂದೆ ವಾರ ಪತ್ರಿಕೆಯೊಂದು ನನ್ನ ವಿರುದ್ಧ ನಿರಂತರವಾಗಿ ಸುದ್ದಿ ಮಾಡಿತ್ತು. ಆದರೂ ನಾನು ಐದು ಬಾರಿ ಎಂಎಲ್​ಎ ಆದೆ. ನೀವು ಏನೇ ಮಾಡಿದರೂ ನಾನು ಹೆದರುವುದಿಲ್ಲ. ಸುಳ್ಳು ಸುದ್ದಿ ಮಾಡಿ ನಿಮ್ಮ ಹೆಸರು ನೀವೇ ಹಾಳು ಮಾಡಿಕೊಳ್ಳುತ್ತೀರಿ. ನಿಮಗೆ ಹೆದರಿ ನಾನು ಮನೆಗೆ ಓಡಿ ಹೋಗುವುದಿಲ್ಲ. ನಿಮಗೆ ಬೇಕಾದ ಹಾಗೆ ಸುದ್ದಿ ಮಾಡಿಕೊಳ್ಳಿ ಎಂದು ಕಿಡಿಕಾರಿದರು.
ರೇವಣ್ಣ ಅವರು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಕೆಲ ಕಾಂಗ್ರೆಸ್​ ಮುಖಂಡರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ ಮಾಧ್ಯಮದವರ ವಿರುದ್ಧ ಸಚಿವರು ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
SCROLL FOR NEXT