ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ರಾಜ್ಯದ ಜನತೆಯನ್ನು ಇಬ್ಭಾಗ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಆರೋಪಿಸಿದ್ದು, ಮುಖ್ಯಮಂತ್ರಿಗಳ ಈ ಒಡೆದು ಆಳುವ ನೀತಿ ಸಂಬಂಧ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ತನ್ನ ನಿಲುವನ್ನು ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಕ್ಷದ ಕೋರ್ ಕಮಿಟಿ ಸಭೆ ನಂತರ ಮಾತನಾಡಿದ ಅವರು , ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬಿಜೆಪಿ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ಉತ್ತರ ಕರ್ನಾಟಕ ಜನತೆ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಇದೇ ಮೊದಲ ಬಾರಿಗೆ 16 ಜಿಲ್ಲೆಗಳ ಜನ ಬಂದ್ ಗೆ ಕರೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಉತ್ತರ ಕರ್ನಾಟಕದ ಜನತೆಯ ಆಕ್ರೋಶ, ಕೋಪಕ್ಕೆ ಸಿಎಂ ಕುಮಾರ ಸ್ವಾಮಿ ಮತ್ತು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ್ದಾರೆ. ಬೇಜಾವಬ್ದಾರಿಯುತ ಹೇಳಿಕೆಯಿಂದ ಸಿಎಂ ಉತ್ತರ ಕರ್ನಾಟಕದ ಜನತೆಯನ್ನು ಅವಮಾನಿಸಿದ್ದಾರೆ , ಅದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಕುಮಾರ ಸ್ವಾಮಿ ಇಡೀ ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿಯೇ ಹೊರತು, ಕೇವಲ 37 ವಿಧಾನಸಭೆ ಕ್ಷೇತ್ರಗಳಿಗೆ ಮಾತ್ರವಲ್ಲ, ಅಧಿಕಾರಕ್ಕಾಗಿ ರಾಜ್ಯ ಒಡೆಯುವ ಪಿತೂರಿ ನಡೆದಿದೆ. ಇಂತ ದುಸ್ಸಾಹಸವನ್ನು ಮತ್ತೆ ಮಾಡಬೇಡಿ, ರಾಜ್ಯದ ಜನತೆ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ,
ತಾವು ಮುಖ್ಯಮಂತ್ರಿಯಾಗಿದ್ದಾಗ ಇಡೀ ರಾಜ್ಯದ ಹಿತಾಸಕ್ತಿಗಾಗಿ ಹಾಗೂ ಅಬಿವೃದ್ಧಿಗಾಗಿ ಗಮನ ನೀಡಿದ್ದೆವು, ರಾಜ್ಯವನ್ನು ಇಬ್ಭಾಗ ಮಾಡಬಾರದೆಂದು ಬಂದ್ ಗೆ ಕರೆ ನೀಡಿರುವ ಸಂಘಟನೆಗಳಲ್ಲಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics