ಕಲಬುರ್ಗಿ: ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಲಿವಿಂಗ್ ಟುಗೆದರ್ ಸರ್ಕಾರ. ಇದು ಹಸಿದವರು ಮತ್ತು ಹಳಸಿದವರ ಸಂಬಂಧ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಾಸಕ ರವಿ ಇವರಿಂದ ರಾಜ್ಯದ ಜನತೆಯ ಸಂಕಷ್ಟ ಪರಿಹಾರವಾಗುವುದಿಲ್ಲ. ಇವರದು ಪವಿತ್ರ ವಿವಾಹವಲ್ಲ. ಇನ್ನು ಲವ್ ಮ್ಯಾರೇಜ್ ಕೂಡ ಅಲ್ಲ. ಇದು ಲಿವಿಂಗ್ ಟುಗೆದರ್ ಸಂಬಂಧ ಎಂದು ವ್ಯಂಗ್ಯ ಮಾಡಿದ್ದಾರೆ.
ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಲಬುರ್ಗಿ ವಿಭಾಗದ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ ಅವರ ಪರ ಪ್ರಚಾರಕ್ಕೆ ಸಿಟಿ ರವಿ ಆಗಮಿಸಿದ್ದರು.
ಇದು ಹಸಿದವರು ಮತ್ತು ಹಳಸಿದವರ ಸಂಬಂಧ ಎಷ್ಟು ದಿನ ಉಳಿಯುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಈ ದೋಸ್ತಿ ಆಗಿದ್ದು ಖಾತೆ ಹಂಚಿಕೆಗೆ ಮುನ್ನವೇ ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವುದನ್ನು ಕಾಣುತ್ತಿದ್ದೇವೆ ಎಂದರು
ಒಂದು ವೇಳೆ ಈ ಲಿವಿಂಗ್ ಟುಗೆದರ್ ಪತನಗೊಂಡಲ್ಲಿ ನಾವು ಸರ್ಕಾರ ರಚನೆಗೆ ಕೈ ಹಾಕುವುದಿಲ್ಲ, ಮತ್ತೆ ಜನತೆಯ ಬಳಿ ಹೋಗುತ್ತೇವೆ. ಅವರು ಅಧಿಕಾರ ನೀಡಿದರಷ್ಟೇ ಸರ್ಕಾರ ರಚಿಸುತ್ತೇವೆ ಎಂದು ಸಿಟಿ ರವಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಯಾವುದೇ ಪಕ್ಷದೊಡನೆ ಮೈತ್ರಿಗೆ ಮುಂದಾಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
ಪೇಜಾವರರಿಗೆ ಕೇಂದ್ರದ ಯೋಜನೆಗಳ ಕುರಿತು ಹೇಳುತ್ತೇನೆ
ಇದಕ್ಕೂ ಮುನ್ನ ಬಳ್ಳಾರಿಯಲ್ಲಿ ಮಾತನಾಡಿದ್ದ ಸಿಟಿ ರವಿ ಪೇಜಾವರ ಶ್ರೀಗಳಿಗೆ ಮೋದಿ ಸರ್ಕಾರದ ಯೋಜನೆಗಳ ಬಗ್ಗೆ ವೈಯಕ್ತಿಕವಾಗಿ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ ಎಂದರು..
ವಾಜಪೇಯಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಸೂಕ್ತ ಪ್ರಚಾರದ ಕೊರತೆಯಿಂದ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದೀಗ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದೇಶೀಯರ ಜತೆಗೆ ವಿದೇಶಿಯರು ಕೈ ಜೋಡಿಸಿದ್ದಾರೆ ಎಂದು ರವಿ ಹೇಳಿದರು.
ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಗಳು ಉಡುಪಿಯಲ್ಲಿ ಇತ್ತೀಚಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಕಾರ್ಯಗಳು ನಮ್ಮ ನಿರೀಕ್ಷೆಯ ಮಟ್ಟ ತಲುಪಿಲ್ಲ ಎಂದಿದ್ದರು.