ರಾಜಕೀಯ

ಚಾಮುಂಡೇಶ್ವರಿ ಜನತೆ ಕೆಲವರ ಷಡ್ಯಂತ್ರಕ್ಕೆ ಬಲಿಯಾಗಿದ್ದಕ್ಕೆ ಸೋತೆ: ಸಿದ್ದರಾಮಯ್ಯ

Lingaraj Badiger
ಬಾಗಲಕೋಟೆ: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲಲು ಪ್ರತಿಪಕ್ಷದವರ ಷಡ್ಯಂತ್ರವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಆರೋಪಿಸಿದ್ದಾರೆ.
ಇಂದು ಬದಾಮಿ ಕ್ಷೇತ್ರದ ಹಿರೆಮುಚ್ಚಳಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಿಎಂ, ಚಾಮುಂಡೇಶ್ವರಿ ಜನತೆ ಕೆಲವರ ಷಡ್ಯಂತ್ರಕ್ಕೆ ಬಲಿಯಾದರು. ಇದರಿಂದ ನಾನು ಅಲ್ಲಿ ಸೋಲುವಂತಾಯಿತು. ಆದರೆ ಬದಾಮಿ ಜನತೆ ಬಲಿಯಾಗಲಿಲ್ಲ. ಇದರಿಂದ ನಾನು ಚಾಮುಂಡೇಶ್ವರಿಯಲ್ಲಿ ಸೋತರೂ ಬದಾಮಿಯಲ್ಲಿ ಗೆದ್ದಿದ್ದೇನೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಘಟಾನು ಘಟಿಗಳು ನನ್ನನ್ನು ಸೋಲಿಸೋಕೆ ಒಂದಾಗಿದ್ದರು. ಬದಾಮಿ ಕ್ಷೇತ್ರದ ಜನತೆ ನನ್ನ ಕೈ ಹಿಡಿದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಂತೆ ನಾನು ನಡೆಯುತ್ತೇನೆ ಎಂದರು. 
ಕ್ಷೇತ್ರದ ಜನತೆಯ ಋಣ ತೀರಿಸುವ ಕಾರ್ಯ ನಾನು ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಸಿದ್ದನಾಗಿದ್ದೇನೆ. ಬದಾಮಿಯಲ್ಲಿಯೇ ಮನೆ ಮಾಡುತ್ತೇನೆ, ನಿರಂತರ ಸಂಪರ್ಕದಲ್ಲಿರುತ್ತೇನೆ.ಬದಾಮಿ ಕ್ಷೇತ್ರವನ್ನ ಅಭಿವೃದ್ಧಿ ಪಡಿಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ದಿನಗಳ ಕಾಲ ಬದಾಮಿ ವಿಧಾನಸಭಾ ಕ್ಷೇತ್ರದ ಪ್ರವಾಸ ಕೈಗೊಂಡಿದ್ದು, ಹಲವು ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಕರ್ತರು, ಜನರ ಜತೆ ಸಮಾಲೋಚನೆ ನಡೆಸಲಿದ್ದಾರೆ. 
SCROLL FOR NEXT