ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರವನ್ನು ತಾವು ಸ್ವಚ್ಛ ಮಾಡಲು ಯತ್ನಿಸಿದರೆ ತನ್ನನ್ನು ಅಧಿಕಾರದಲ್ಲಿರಲು ಬಿಡುವುದಿಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಿನ್ನೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಸೇರಿದಂತೆ ಹಿರಿಯ ಗಾಂಧೀವಾದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ಬೇರು ಎಷ್ಟು ಆಳವಾಗಿ ಇಳಿದು ಹೋಗಿದೆ ಎಂದರೆ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕು ಎಂದು ಅನಿಸುತ್ತದೆ ಆದರೆ ಎಲ್ಲಿಂದ ಆ ಕೆಲಸ ಆರಂಭಿಸಬೇಕು ಎಂದು ತಿಳಿಯುತ್ತಿಲ್ಲ ಎಂದರು.
ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಬೇಕೆಂದು ನಾನು ಹೊರಟರೆ 2 ನಿಮಿಷ ಕೂಡ ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಬಿಡುವುದಿಲ್ಲ. ಭ್ರಷ್ಟಾಚಾರ ಇದೆ ಎಂದು ಗೊತ್ತಾದ ಇಲಾಖೆಯಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದೇ ಇದಕ್ಕಿರುವ ಉಪಾಯ ಎಂದು ನನಗನಿಸುತ್ತದೆ. ಇಂದು ಗಾಂಧಿ ತತ್ವದಲ್ಲಿ ನಂಬಿಕೆಯಿಟ್ಟು ಆ ಮಾರ್ಗದಲ್ಲಿ ನಡೆಯುವವರು ವಿರಳ ಎಂದರು.
ವಿಧಾನಸೌಧದ ಕಾರಿಡಾರ್ ಗಳಲ್ಲಿ ಮಧ್ಯವರ್ತಿಗಳು ಅಡ್ಡಾಡುತ್ತಾ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ. ರಾಜ್ಯದ ಕಾರ್ಯದರ್ಶಿ ಕಚೇರಿಯ ಮೂರೂ ಮಹಡಿಗಳಲ್ಲಿ ಭ್ರಷ್ಟಾಚಾರ ಅಧಿಕಾರ ಚಲಾಯಿಸುತ್ತಿದೆ ಎಂದು ಆರೋಪಿಸಿದರು.
ಆರಂಭದಲ್ಲಿ ತಮ್ಮ ಭಾಷಣದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೆಂದು ಸಲಹೆ ನೀಡಿದ ಅವರು, ಇಲ್ಲಿಯವರೆಗೆ ಸಾಕಷ್ಟು ಲೂಟಿ ಮಾಡಲಾಗಿದೆ. ಇಲ್ಲಿಯವರೆಗೆ ಎಷ್ಟು ದುಡ್ಡು ಮಾಡಿಕೊಂಡಿದ್ದೀರಿ ಎಂದು ಅಧಿಕಾರಿಗಳನ್ನು ನಾನು ಕೇಳುವುದಿಲ್ಲ, ಆದರೆ ಇನ್ನು ಮುಂದೆ ರಾಜ್ಯ ಮತ್ತು ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ಹಿಂದಿನ ಸರ್ಕಾರ ರಚಿಸಿದ್ದ ಭ್ರಷ್ಟಾಚಾರ ವಿರೋಧಿ ದಳವನ್ನು ವಿಸರ್ಜಿಸುವ ಕುರಿತು ಮುಖ್ಯಮಂತ್ರಿಗಳು ಅನಿಬದ್ಧವಾಗಿರುವ ಸಂದರ್ಭದಲ್ಲಿ ಮತ್ತು ಲೋಕಾಯುಕ್ತವನ್ನು ದುರ್ಬಲಗೊಳಿಸಿರುವ ಬಗ್ಗೆ ಕೂಡ ಸರ್ಕಾರದ ಮೇಲೆ ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಇಡೀ ಭಾಷಣದಲ್ಲಿ ಸರ್ಕಾರದ ಆಡಳಿತದಲ್ಲಿ, ಅಧಿಕಾರಿಗಳ ಮಟ್ಟದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು, ಗಾಂಧಿ ತತ್ವಗಳನ್ನು ಅಳವಡಿಸಬೇಕೆಂದು ಮಾತನಾಡಿದರೇ ಹೊರತು ರಾಜಕೀಯ ನಾಯಕರಲ್ಲಿರುವ ಭ್ರಷ್ಟಾಚಾರದ ಬಗ್ಗೆ ಚಕಾರವೆತ್ತಲಿಲ್ಲ.