ರಾಜಕೀಯ

ರೆಸಾರ್ಟ್ ನಲ್ಲಿ ಪುತ್ರ, ಕಾಂಗ್ರೆಸ್ ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ರಹಸ್ಯ ಸಭೆ

Lingaraj Badiger
ಚಾಮರಾಜನಗರ: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಧಾನಿಯಿಂದ ತವರು ಜಿಲ್ಲೆಯತ್ತ ಮುಖ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಭರ್ಜರಿ ಮತಯಾತ್ರೆ ನಡೆಸಿದ ಬಳಿಕ ವಿಶ್ರಾಂತಿ ನೆಪದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರದ ಸೆರಾಯ್ ಜಂಗಲ್ ರೆಸಾರ್ಟ್‍ಗೆ ತೆರಳಿದ್ದಾರೆ.
ರೆಸಾರ್ಟ್ ನಲ್ಲಿ ಇಂದು ಮಧ್ಯಾಹ್ನದವರೆಗೆ ತಮ್ಮ ಪುತ್ರ ಡಾ. ಯತೀಂದ್ರ ಹಾಗೂ ಕೆಲವು ಆಪ್ತರ ಜತೆ ರಹಸ್ಯ ಸಭೆ ಸಭೆ ನಡೆಸಿದ್ದಾರೆ.
ಚುನಾವಣೆಯಲ್ಲಿ ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಗೆಲುವು ಕುರಿತು ತಂತ್ರಗಾರಿಕೆ ರೂಪಿಸುವುದು ಸಭೆಯ ಉದ್ದೇಶ ಎಂದು ಮೂಲಗಳು ತಿಳಿಸಿವೆ.
ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ವೆಂಕಟೇಶ್, ಮುಖಂಡರಾದ ಮರೀಗೌಡ, ಚೆನ್ನಾರೆಡ್ಡಿ, ನಂಜಪ್ಪ ಅವರು ಮೊದಲ ಹಂತದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.   
ಸ್ವಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ಅವರು, ತಮ್ಮ ಕ್ಷೇತ್ರದ ನಾಯಕರನ್ನು ಹೊರತುಪಡಿಸಿ ಬೇರೆ ಯಾರ ಭೇಟಿಗೂ ಅವಕಾಶ ನೀಡಿಲ್ಲ. ಸಿಎಂ ಇರುವ ಮೂರು ಕೊಠಡಿಗಳಿಗೆ ಸೇವೆ ಒದಗಿಸುವ ಸಿಬ್ಬಂದಿಯ  ಮೊಬೈಲ್ ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದ ಹಲವು ಸ್ಥಳೀಯ  ಮುಖಂಡರಿಗೆ ರೆಸಾರ್ಟ್‌  ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಶಾಸಕರಾದ ಭೈರತಿ ಬಸವರಾಜ್ ಹಾಗೂ ಪುಟ್ಟರಂಗಶೆಟ್ಟಿ ಅವರನ್ನೂ  ಭದ್ರತಾ ಸಿಬ್ಬಂದಿ ತಡೆದರು. ಕೆಲಕಾಲದ ನಂತರ ಅವರನ್ನು ರೆಸಾರ್ಟ್‌ ಒಳಗೆ ಬಿಡಲಾಯಿತು. ಆದರೆ, ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ನಂತರ, ಅವರು ವಾಪಸ್ ಮೈಸೂರಿಗೆ ತೆರಳಿದ್ದಾರೆ.
SCROLL FOR NEXT