ಬೆಂಗಳೂರು : ದೇಶದ 11 ಬ್ಯಾಂಕುಗಳಲ್ಲಿ ನಡೆದಿರುವ 61, 036 ಕೋಟಿ ರೂಪಾಯಿ ಹಗರಣದಿಂದಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ದುರ್ಬಲಗೊಂಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜಿವಾಲಾ, ಇಷ್ಟೊಂದು ದೊಡ್ಡ ಪ್ರಮಾಣದ ಹಗರಣ ನಡೆದಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬ್ಯಾಂಕುಗಳಿಂದ ಸಾಲ ಪಡೆದು ವಿದೇಶಕ್ಕೆ ಪಾಲಾಯನ ಮಾಡುತ್ತಿರುವ ಉದ್ಯಮದಾರರೊಂದಿಗೆ ಬಿಜೆಪಿ ನಾಯಕರು ಸಂಪರ್ಕ ಹೊಂದಿದ್ದಾರೆ. ಕೇಂದ್ರಸರ್ಕಾರದ ಮೂಗಿನ ಕೆಳಗೆಯೇ ಬ್ಯಾಂಕುಗಳಲ್ಲಿ ಇರಿಸಲಾಗಿದ್ದ ಸಾರ್ವಜನಿಕರ ಹಣವನ್ನು ದೋಚಲಾಗುತ್ತಿದೆ ಎಂದು ಆರೋಪಿಸಿದರು.
ಇಂತಹ ಬ್ಯಾಂಕು ಹಗರಣಗಳ ಬಗ್ಗೆ ಕೇಂದ್ರಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮೌನ ಮುರಿಯಬೇಕು ಎಂದು ಆಗ್ರಹಿಸಿದರು.
ಸಿಬಿಎಸ್ ಇ ಪ್ರಶ್ನೆಪತ್ರಿಕೆ ಸೋರಿಕೆ ಹಿಂದಿರುವವರನ್ನು ಸರ್ಕಾರ ಏಕೆ ಬಂಧಿಸಿಲ್ಲ, ಯಾರನ್ನಾದರೂ ರಕ್ಷಿಸಲು ಕೇಂದ್ರಸರ್ಕಾರ ಯತ್ನಿಸುತ್ತಿದ್ದೆಯಾ ಎಂದು ಪ್ರಶ್ನಿಸಿದ ಸುರ್ಜಿವಾಲ್, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಭವಿಷ್ಯಕ್ಕಿಂತಲೂ ಆರೋಪಿಗಳನ್ನು ಬಿಜೆಪಿ ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.