ಬಳ್ಳಾರಿ : ಕರ್ನಾಟಕದಲ್ಲಿ ಸೀದಾ ರುಪಯ್ಯಾ ಸರ್ಕಾರ ಇದೆ. ಈ ರುಪಯ್ಯಾ ಸರ್ಕಾರ ಕರ್ನಾಟಕವನ್ನು ಸಾಲದಲ್ಲಿ ಮುಳುಗುವಂತೆ ಮಾಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ
ಬಳ್ಳಾರಿಯಲ್ಲಿಂದು ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಣ್ಣ ಕೆಲಸವಿದ್ದರೂ ಕೂಡಾ ರೂಪಾಯಿ ಇಲ್ಲದೇ ಯಾವೊಂದು ಕೆಲಸವೂ ನಡೆಯುವದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿಯ ಬಗ್ಗೆ ಕಾಂಗ್ರೆಸ್ ಕೇವಲ ಅಪ ಪ್ರಚಾರ ಮಾಡುತ್ತಿದೆ. ಕೇವಲ ರಾಜಕೀಯಕ್ಕಾಗಿ ಪಾದಯಾತ್ರೆ ಮಾಡಿತ್ತು. ಐದು ವರ್ಷದಲ್ಲಿ ಗಣಿ ನೀತಿಯನ್ನು ಮಾಡಲಿಲ್ಲ, ಅಕ್ರಮ ಗಣಿಗಾರಿಕೆ ಮಾಡಿ, ಜೈಲಿಗೆ ಹೋದವರಿಗೆ ಕಾಂಗ್ರೆಸ್ ಮಣೆ ಹಾಕಿ ಟಿಕೆಟ್ ಕೊಟ್ಟಿದೆ. ಮಧ್ಯವರ್ತಿಗಳ ಮೂಲಕ ಕೋಟಿ ಕೋಟಿ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತುಂಗಭದ್ರಾ ನದಿಯಲ್ಲಿ ತುಂಬಿರುವ ಹೂಳನ್ನು ಎತ್ತಲು ಕೂಡಾ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆದರೆ, ಚುನಾವಣೆ ಹತ್ತಿರ ಬಂದಾಗ ಸಣ್ಣ ಪುಟ್ಟ ಚೆಕ್ ಡ್ಯಾಂ ನಿರ್ಮಿಸುವ ಮಾತನಾಡುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಸೋನಿಯಾಗಾಂಧಿ 3 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ನ್ನು ನೀಡಲಿಲ್ಲ ಎಂದು ಅಪಾದಿಸಿದರು.
ಕಾಂಗ್ರೆಸ್ ಸರ್ಕಾರ 40 ವರ್ಷದಿಂದ ಹಿಂದುಳಿದ ವರ್ಗದವರ ಧ್ವನಿ ಅಡಗಿಸಿದೆ. ಕಾಂಗ್ರೆಸ್ ಓಬಿಸಿ ನಿಗಮ ಸ್ಥಾಪನೆಗೂ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಓಬಿಸಿ ನಿಗಮಕ್ಕೆ ಸಂವಿಧಾನಬದ್ಧ ಮಾನ್ಯತೆ ನೀಡಿಯೇ ತೀರುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್, ದಲಿತ, ಆದಿವಾಸಿಗಳ ವಿರೋಧಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿ ಮೋಸ ಮಾಡಿದೆ.ಗುಪ್ತ ಮತದಾನದ ಮೂಲಕ ಸಿಎಂ ಸ್ಥಾನ ಖರ್ಗೆ ಕೈ ತಪ್ಪಿಸುವಂತೆ ಸಿದ್ದರಾಮಯ್ಯ ವಂಚನೆ ಮಾಡಿದ್ದಾರೆ ಎಂದು ಪ್ರಧಾನಿ ಅಪಾದಿಸಿದರು.
ಬಿಜೆಪಿ ದಲಿತರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಚಹಾ ಮಾರುವನನ್ನು ಪ್ರಧಾನಿಯನ್ನಾಗಿ ಮಾಡಿದ್ದು ಎಲ್ಲಾ ವರ್ಗದವರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಕರ್ನಾಟಕದ ಪ್ರಗತಿಯಾದರೆ,ದೇಶದ ಪ್ರಗತಿಯಾದ್ದಂತೆ, ದೇಶದ ಪ್ರಗತಿಯಾದರೆ, ಕರ್ನಾಟಕದ ಪ್ರಗತಿಯಾದ್ದಂತೆ ಆಗಲಿದ್ದು, ಬಿಜೆಪಿ ಈ ಮಹಾಕಾರ್ಯಕ್ಕೆ ರಾಜ್ಯದ ಜನರು ಆಶೀರ್ವದಿಸಬೇಕೆಂದು ಪ್ರಧಾನಿ ಮನವಿ ಮಾಡಿಕೊಂಡರು.