ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಹತ್ತಿರ ಬರುತ್ತಿರುವಂತೆ ಯಂಗ್ ಇಂಡಿಯಾ ಇನಿಷಿಯೇಟಿವ್ ಎಂಬ ಸಂಘಟನೆ ಬಿಡುಗಡೆ ಮಾಡಿರುವ ವಿಡಿಯೊ ಸಾಮಾಜಿಕ ಅಭದ್ರತೆ ಮತ್ತು ಜನರಲ್ಲಿ ಭಯ ಹುಟ್ಟುಹಾಕುವಂತಿದ್ದು ಜನರು ಬುದ್ದಿವಂತಿಕೆಯಿಂದ ಮತ ಚಲಾಯಿಸುವಂತೆ ಕಾಂಗ್ರೆಸ್ ಮನವಿ ಮಾಡಿಕೊಂಡಿದೆ.
ಯಂಗ್ ಇಂಡಿಯಾ ಇನಿಷಿಯೇಟಿವ್ ಸಂಘಟನೆ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಜನರು ಪಾಶ್ಚಾತ್ಯ ಉಡುಗೆ, ತೊಡುಗೆ, ಆಹಾರ ಸಂಸ್ಕೃತಿಯನ್ನು ಬಿಡಬೇಕೆಂದು ಹೇಳಲಾಗಿದೆ. ಅಲ್ಲದೆ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಕ್ಕೆ ಜೋಡಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವುದನ್ನು ತೋರಿಸಲಾಗಿದೆ. ವಿಡಿಯೊದಲ್ಲಿ ಯಾವ ರಾಜಕೀಯ ಪಕ್ಷವನ್ನು ಹೆಸರಿಸಿಲ್ಲ. ಆದರೆ ಕರ್ನಾಟಕದ ಜನತೆ ಸ್ವತಂತ್ರವಾಗಿ, ಬುದ್ಧಿವಂತಿಕೆಯಿಂದ, ಜವಾಬ್ದಾರಿಯುತವಾಗಿ, ಧಮಾತ್ಮಕವಾಗಿ ಯೋಚಿಸಿ ಮೇ 12ರಂದು ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಎನ್ ಡಿಎ ಸರ್ಕಾರದ ಗೋಮಾಂಸ ಮಾರಾಟ ನಿಷೇಧ, ಜಾನುವಾರುಗಳನ್ನು ಕೊಲ್ಲುವುದಕ್ಕೆ ನಿಷೇಧ ಇತ್ಯಾದಿಗಳಿಗೆ ಪೂರಕವಾಗಿ ವಿಡಿಯೊ ಇದೆ ಎಂದು ಹೇಳಲಾಗುತ್ತಿದೆ.
ಇಂತಹ ವಿಷಯಗಳಿಗೆ ಬಿಜೆಪಿಯನ್ನು ಸದಾ ಟೀಕಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ಈ ವಿಡಿಯೊವನ್ನು ರಿ ಟ್ವೀಟ್ ಮಾಡಿ, ತನ್ನ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಹಾಕಿಕೊಂಡಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ರೀತಿ ಆಗುತ್ತದೆ. ಜನರು ಎಚ್ಚರಿಕೆಯಿಂದ ಬುದ್ಧಿವಂತಿಕೆಯಿಂದ ಮತ ಚಲಾಯಿಸಿ ಎಂದು ಟಾಂಗ್ ಕೊಟ್ಟು ರಿ ಟ್ವೀಟ್ ಮಾಡಿದೆ.