ರಾಜಕೀಯ

ಕೇವಲ ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ಕಾರ್ಯಕರ್ತರ ಬರ್ಬರ ಹತ್ಯೆ: ಪ್ರಧಾನಿ ಮೋದಿ

Lingaraj Badiger
ಮಂಗಳೂರು: ಕೇವಲ ರಾಜಕೀಯ ದ್ವೇಷಕ್ಕಾಗಿ ನಮ್ಮ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್‌ ಪಾಲಿಸುವ ಪ್ರಜಾಪ್ರಭುತ್ವ ಇದೇನಾ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪ್ರಶ್ನಿಸಿದ್ದಾರೆ. 
ಇಂದು ಮಂಗಳೂರಿನಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜ್ಯದಲ್ಲಿ ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದ್ದು, ಇದಕ್ಕೆ ಮೇ 12ರಂದು ಕರ್ನಾಟಕ ಜನತೆ ಬಲವಾದ ಉತ್ತರ ನೀಡಲಿದ್ದಾರೆ ಎಂದರು.
ಸುಶಿಕ್ಷಿತ ಕರ್ನಾಟಕ ನಮ್ಮ ಬದ್ಧತೆ. ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ದೋಷಿಗಳಿಗೆ ಮರಣ ದಂಡನೆ ವಿಧಿಸುವ ಸುಗ್ರೀವಾಜ್ಞೆಗೆ ನಾವು ಅನುಮೋದನೆ ನೀಡಿದ್ದೇವೆ. ನಮ್ಮ ಸರ್ಕಾರ ಬಡವರು ಮತ್ತು ನಿರ್ಲಕ್ಷಿತರ ಸೇವೆಗೆ ಸಮರ್ಪಿತವಾಗಿದೆ. ಅವರ ಬ್ಯಾಂಕ್‌ ಖಾತೆಗಳನ್ನು ತೆರೆಯುವ ಮೂಲಕ ಅವರನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದೇವೆ ಎಂದು ಪ್ರಧಾನಿ ಹೇಳಿದರು. 
ನೋಟು ಅಮಾನ್ಯೀಕರಣದ ಆಘಾತದಿಂದ ಕಾಂಗ್ರೆಸ್‌ ಇನ್ನೂ ಹೊರ ಬಂದಿಲ್ಲ. ಕಾಂಗ್ರೆಸ್‌ ಸುಳ್ಳನ್ನೇ ಹಬ್ಬಿಸುತ್ತದೆ. ಯಾರಾದರೂ ಸತ್ಯ ಹೇಳಿದರೆ ಅದಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ತಂತ್ರಗಳೆಲ್ಲ ಜನರಿಗೆ ಈಗ ಅರಿವಾಗಿದೆ ಎಂದರು.
ಬಿಜೆಪಿ ಗೆದ್ದಾಗಲೆಲ್ಲ ಇವಿಎಂಗಳನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತದೆ. ಮೇ 15ರಂದು ನೀವು ಮತ್ತೊಮ್ಮೆ ಈ ಆರೋಪವನ್ನು ಕೇಳಲಿದ್ದೀರಿ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್‌ ತನ್ನ ದುರಹಂಕಾರದಿಂದಲೇ ಎಲ್ಲ ರಾಜ್ಯಗಳನ್ನು ಕಳೆದುಕೊಂಡಿದೆ. ಅಂತಹ ನಡವಳಿಕೆಗಳನ್ನು ಜನ ಒಪ್ಪುವುದಿಲ್ಲ. ಕಾಂಗ್ರೆಸ್‌ ಅನ್ನು ಕರ್ನಾಟಕದ ಜನತೆ ತಿರಸ್ಕರಿಸುವುದು ನಿಶ್ಚಿತ ಎಂದರು.
SCROLL FOR NEXT