ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಆದಾಯ ಮತ್ತು ತೆರಿಗೆ ಇಲಾಖೆಯ ದಾಳಿ ಪ್ರಶ್ನಾರ್ಹವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿರುವ ಅವರು, ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕರ ಮೇಲೆ ಆದಾಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡುತ್ತಾರೆ. ಇದು ಪ್ರಶ್ನಾರ್ಹವಾದದ್ದು. ಐಟಿ ದಾಳಿ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಮಹಾದಾಯಿ ವಿಚಾರದಲ್ಲಿ ಪ್ರಧಾನಿ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಜನರನ್ನು ತಪ್ಪು ಹಾದಿಗೆಳೆಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮೋದಿಯವರ ವಾಕರಿಕೆ ತರಿಸುವ ಈ ರೀತಿಯ ಹೇಳಿಕೆಗಳನ್ನು ಜನರು ಒಪ್ಪುವುದಿಲ್ಲ.
ಮಹದಾಯಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ದೇಶದ ಪ್ರಧಾನಮಂತ್ರಿಗಳದ್ದಾಗಿದೆ. ಅದನ್ನು ಮೋದಿಯವರು ನಿಭಾಯಿಸಲಿಲ್ಲ. 2007ರಲ್ಲಿ ಸೋನಿಯಾ ಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದರೇ? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರು ಕೀಳು ಮಟ್ಟದ ಭಾಷೆ ಬಳಸಿ ಪ್ರಚಾರ ನಡೆಸುತ್ತಿದ್ದು, ವಾಕರಿಕೆ ತರಿಸುವಂತಿದೆ. ರಾಜ್ಯ ಬಿಜೆಪಿ ನಾಯಕರಿಗೆ ಬೆಲೆಯಿಲ್ಲ. ಆದ್ದರಿಂದ ಮೋದಿ ಹಾಗೂ ಅಮಿತ್ ಸಾ ಅವರನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ. ಇದು ರಾಜ್ಯದ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ತಮ್ಮ ಕೈಯಲ್ಲಿ ಸಾಧ್ಯವಾಗದ ಕಾರಣ ಮೋದಿಯವರ ಮೇಲೆ ರಾಜ್ಯ ಬಿಜೆಪಿ ನಾಯಕರು ಅವಲಂಬಿತರಾಗಿದ್ದಾರೆ. ಇಲ್ಲಿವರೆಗೂ 7-8 ಬಾರಿ ಮೋದಿಯವರು ರಾಜ್ಯಕ್ಕೆ ಬಂದಿದ್ದಾರೆ. ಅವರ ಪ್ರಭಾವ ರಾಜ್ಯದ ಮೇಲಾಗಿಲ್ಲ. ಮೋದಿಯವರು ಪ್ರಚಾರ ಸಂದರ್ಭದಲ್ಲಿ ಬಳಕೆ ಮಾಡುತ್ತಿರುವ ಭಾಷೆ ನಾಗರೀಕವಾಗಿಲ್ಲ. ಕೀಳು ಮಟ್ಟದ ಹಾಗೂ ಅಸಂಸದೀಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆ.
ಈ ಬಾರಿ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆಂದು ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇಬ್ಬರೂ ಹೇಳುತ್ತಿದ್ದಾರೆ. ಬಿಜೆಪಿಯವರ ಸಾಧನೆಗಳನ್ನು ನೋಡಿದರೆ, ಪ್ರಮುಖ ಕ್ಷೇತ್ರಗಳಲ್ಲಿ ಅವರು ಗೆಲುವನ್ನೇ ಸಾಧಿಸಿಲ್ಲ. ವಿಧಾನಸಭಾ ಚುನಾವಣೆ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಇದೇ ವೇಲೆ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics