ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಳೆಯ ಕ್ಷೇತ್ರಗಳಲ್ಲಿ ಒಂದಾದ ಬಸವನ ಗುಡಿ ವಿಧಾನಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಈ ಬಾರಿ ಇಲ್ಲಿಗೆ ಲಗ್ಗೆಯಿಡಲು ಕಾಂಗ್ರೆಸ್ ತೀವ್ರ ಪ್ರಯತ್ನ ನಡೆಸುತ್ತಿದೆ.
ಬಸವನಗುಡಿ ವಿಧಾನಸಭಾ ಕ್ಷೇತ್ರ ಈಗಾಗಲೇ ಸಾಕಷ್ಟು ಅಭಿವೃದ್ಧಿಯಿಂದ ಕೂಡಿದ್ದು, ಇಲ್ಲಿನ ಮತದಾರರನಿಂದ ಹೆಚ್ಚಿನ ಬೇಡಿಕೆಗಳೇನೂ ಇಲ್ಲ. ಕ್ಷೇತ್ರದ ಮೂಲಭೂತ ಸೌಕರ್ಯ ಮೊದಲಿನಿಂದಲೂ ಉತ್ತಮವಾಗಿಯೇ ಇದೆ. ಹೀಗಾಗಿ ಇಲ್ಲಿನ ಅಭ್ಯರ್ಥಿಗಳ ಗೆಲವು ಅವರ ವರ್ಚಸ್ಸು ಮತ್ತು ಮತದಾರನ ನಡೆಸಿಕೊಳ್ಳುವ ರೀತಿಯ ಮೇಲೆ ಆಧಾರಿತವಾಗಿರುತ್ತದೆ. ಇಲ್ಲಿ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎನ್ನುವುದಕ್ಕಿಂತ ಕ್ಷೇತ್ರದ ಮತದಾರರಿಗೆ ಅಭ್ಯರ್ಥಿ ಎಷ್ಟು ಹತ್ತಿರವಾಗಿದ್ದಾನೆ ಎಂದು ಪ್ರಮುಖವಾಗಿರುತ್ತದೆ.
1972ಕ್ಕೂ ಮೊದಲು ಬಸವನಗುಡಿ ಕಾಂಗ್ರೆಸ್ ಪಕ್ಷದ ಪ್ರಬಲ ನೆಲೆಯಾಗಿತ್ತು. ಆದರೆ 1972ರಲ್ಲಿ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಬಾವುಟ ಹಾರಿತ್ತು. ಬಳಿಕ ಸತತ 22 ವರ್ಷಗಳ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಜೆಡಿಎಸ್ ಮತ್ತು ಬಿಜೆಪಿ ನಡುವೆ ಇಲ್ಲಿ ನೇರ ಪೈಪೋಟಿ ಇತ್ತು. ಇದೇ ಕ್ಷೇತ್ರದಿಂದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು, 2 ಬಾರಿ ವಿಧಾನಸಭೆಗೆ ಆರಿಸಿ ಬಂದಿದ್ದರು. ಜನತಾ ಪಕ್ಷದಿಂದ ಒಮ್ಮೆ ಹಾಗೂ ಜನತಾದಳದಿಂದ ಒಮ್ಮೆ ಹೆಗಡೆ ಆಯ್ಕೆಯಾಗಿದ್ದರು. 1994ರಿಂದ ಸತತ 4 ಬಾರಿ ಇಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು.
ಆದರೆ 2004ರಲ್ಲಿ ಮತ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಕೆ ಅವರು ಬಿಜೆಪಿಯ ಸುಬ್ಬಾರೆಡ್ಡಿ ಕೆಎನ್ ಅವರನ್ನು ಪರಾಭವಗೊಳಿಸಿದ್ದರು. ಇನ್ನು ಹಾಲಿ ಶಾಸಕ ಬಿಜೆಪಿಯ ಸುಭ್ರಮಣ್ಯ ಎಲ್ ಎ ಇಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದು, ಈ ಬಾರಿಯೂ ತಾವೇ ಗೆಲ್ಲುವು ವಿಶ್ವಾಸದಲ್ಲಿದ್ದಾರೆ. ಬಿಜೆಪಿಗೆ ಜೆಡಿಎಸ್ ಅಭ್ಯರ್ಥಿ ಕೆ ಬಾಗೇಗೌಡ ತೀವ್ರ ಪೈಪೋಟಿ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಎಂ ಬೋರೇಗೌಡ ಸ್ಪರ್ಧಿಸಿದ್ದಾರೆ.
ಇನ್ನು ಕ್ಷೇತ್ರದ ಮತದಾರರು ಅಭಿಪ್ರಾಯಪಟ್ಟಿರುವಂತೆ ಹಾಲಿ ಶಾಸಕ ಸುಬ್ರಮಣ್ಯ ಅವರು ಮೊದಲಿನಿಂದಲೂ ಕ್ಷೇತ್ರದಲ್ಲಿ ಮತದಾರರಿಗೆ ಹತ್ತಿರಾಗಿದ್ದು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕಳೆದ ನಾಲ್ಕೈದು ತಿಂಗಳಿನಿಂದ ಮಾತ್ರ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ಮತದಾರರ ಬಳಿ ಬರುವ ಅಭ್ಯರ್ಥಿಗಳಿಗಿಂತ ಸದಾಕಾಲ ಮತದಾರರ ಸಂಪರ್ಕದಲ್ಲಿರುವವರೇ ಮುಖ್ಯ ಎಂಬ ಭಾವನೆ ಇದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಬ್ರಮಣ್ಯ ಪರ ಒಲವಿದೆ ಎನ್ನಲಾಗುತ್ತಿದೆ.
ಇನ್ನು ಕ್ಷೇತ್ರದ ಜಾತಿ ಲೆಕ್ಕಾಚಾರಕ್ಕೆ ಬರುವುದಾದರೇ ಹಿಂದೂ ಮತದಾರರ ಪಾತ್ರವೇ ಇಲ್ಲಿ ನಿರ್ಣಾಯಕ. ಪ್ರಮುಖವಾದಿ ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯದ ಮತದಾರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರಹಣಾಹಣಿ ಇದೆ ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಬೋರೇಗೌಡ ಇಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಬಸವನ ಗುಡಿಯಲ್ಲಿ ಒಟ್ಟು ಆರು ಬಿಬಿಎಂಪಿ ವಾರ್ಡ್ ಗಳಿದ್ದು, ಎಲ್ಲ ವಾರ್ಡ್ ಗಳಲ್ಲೂ ಬಿಜೆಪಿ ಕಾರ್ಪೋರೇಟರ್ ಗಳೇ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics