ರಾಜಕೀಯ

ಕರ್ನಾಟಕದಲ್ಲಿಯೇ ನನ್ನ ರಾಜಕೀಯ ಭವಿಷ್ಯ : ರಾಹುಲ್ ಗಾಂಧಿ

Nagaraja AB

ಗೌರಿ ಬಿದನೂರು :ಕರ್ನಾಟಕದ ಚುನಾವಣೆಯಲ್ಲಿ ಎರಡು ವಿಚಾರಧಾರೆಗಳ  ನಡುವೆ ಹೋರಾಟ ನಡೆಯುತ್ತಿದೆ. ಬಸವಣ್ಣನವರ ಮಾತಿನಂತೆ ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು,  ಕರ್ನಾಟಕದಲ್ಲಿಯೇ  ನನ್ನ ರಾಜಕೀಯ ಭವಿಷ್ಯ  ಅಡಗಿದೆ   ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

 ಇಲ್ಲಿ ಆಯೋಜಿಸಿದ್ದ  ಚುನಾವಣಾ ಪ್ರಚಾರ   ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಸಮುದಾಯದ ಜನರನ್ನೂ ಒಗ್ಗೂಡಿಸಿಕೊಂಡು ರಾಜ್ಯವನ್ನು ಬೆಳೆಸಬೇಕಿದೆ.  ಇಲ್ಲಿಂದಲೇ  ನನ್ನ ಉಜ್ವಲ ರಾಜಕೀಯ ಭವಿಷ್ಯ ಆರಂಭವಾಗಲಿದೆ ಎಂದರು.

ಪ್ರಧಾನಿ ನರೇಂದ್ರಮೋದಿ ಮನ್ ಕೀ ಬಾತ್ ಹೇಳ್ತಾರೆ ಅಷ್ಟೇ ಆದರೆ, ದೇಶದ ಜನತೆ ಏನೂ ಹೇಳುತ್ತಾರೆ ಎಂಬುದನ್ನು ಕೇಳುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ  ಉನ್ನಾವೋದಲ್ಲಿ ಕೆಲ ತಿಂಗಳ ಹಿಂದೆ ಬಿಜೆಪಿ ಶಾಸಕ  ನಡೆಸಿದ ಅತ್ಯಾಚಾರ ಪ್ರಕರಣದ ನಂತರ ಮೋದಿ ಏನ್ನನ್ನೂ ಬಾಯಿ ಬಿಡುತ್ತಿಲ್ಲ, ತಮ್ಮದೇ ಪಕ್ಷದ ಶಾಸಕನಿಂದಲೇ ಮಹಿಳೆ ಮೇಲೆ ಅತ್ಯಾಚಾರ ಆಗಿದ್ದರೂ  ಪ್ರಧಾನಿ ಮೋದಿ ಒಂದು ಮಾತನ್ನು ಸಹ ಆಡಲಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.

 ಇದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕೊಲೆ ಆರೋಪಿ ಎಂದು ಕರೆಯುವ ಮೂಲಕ  ವಾಗ್ದಾಳಿ ನಡೆಸಿದರು.  ಅಮಿತ್ ಶಾ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ, ಕೊಲೆ ಆರೋಪಿಯನ್ನು ಮುಖ್ಯಸ್ಥನನ್ನಾಗಿ ಮಾಡಿಕೊಂಡಿರುವ ಬಿಜೆಪಿ ಪ್ರಾಮಾಣಿಕತೆ, ಯೋಗ್ಯತೆ ಬಗ್ಗೆ ಮಾತನಾಡುತ್ತದೆ ಎಂದು ವಾಕ್ ಪ್ರಹಾರ ನಡೆಸಿದರು.

 ಚುನಾವಣೆಯಲ್ಲಿ ಜೈಲಿಗೆ ಹೋಗಿ ಬಂದಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಏಕೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮೋದಿ ಆಯ್ಕೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ  ಪ್ರಧಾನಿ ಅಭ್ಯರ್ಥಿ  ಏಕೆ ಆಗಬಾರದು ಎಂದು ಪತ್ರಕರ್ತರನ್ನು ಪ್ರಶ್ನಿಸುವ ಮೂಲಕ ತಾವೂ ಪ್ರಧಾನಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು.


SCROLL FOR NEXT