ತುಮಕೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ನಾಳೆಯ ಫಲಿತಾಂಶದಲ್ಲಿ ಅತಂತ್ರ ಪರಿಸ್ಥಿತಿ ಬಂದರೆ ತುಮಕೂರಿನ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ತರುವಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ.
ಮುದ್ದಿಹನುಮೇಗೌಡ, 1994ರಿಂದಲೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಂದು ಒಕ್ಕಲಿಗ ನಾಯಕರಾಗಿದ್ದ ಮಾಜಿ ಸಚಿವ ವೈ ಕೆ ರಾಮಯ್ಯ ವಿರುದ್ಧ ಕುಣಿಗಲ್ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಮುದ್ದಹನುಮೇಗೌಡರಿಗೆ ದೇವೇಗೌಡರು ಸಹಾಯ ಮಾಡಿದ್ದರು.
2009ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು. 2013ರಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ತೀವ್ರ ವಿರೋಧ ಕೇಳಿಬಂದು ಜೆಡಿಎಸ್ ಡಿ ನಾಗರಾಜಯ್ಯಗೆ ಟಿಕೆಟ್ ಕೊಟ್ಟು ಅವರು ಗೆದ್ದು ಬಂದಿದ್ದರು.
ಇದಾದ ನಂತರ ಮುದ್ದಹನುಮೇಗೌಡ ಇನ್ನೇನು ರಾಜಕೀಯದಿಂದ ಮರೆಯಾಗುತ್ತಾರೆ ಎನ್ನುವಷ್ಟರಲ್ಲಿ 2014 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಟಿಕೆಟ್ ಕೊಡಿಸಿದ್ದರು. ಪರಮೇಶ್ವರ್ ತಮಗೆ ರಾಜಕೀಯ ಮರುಹುಟ್ಟು ನೀಡಿದ್ದಾರೆ ಎಂದು ಮುದ್ದಹನುಮೇಗೌಡ ಹೇಳುತ್ತಾರೆ.
ಇದಕ್ಕೆ ಪ್ರತ್ಯುಪಕಾರವಾಗಿ ಪರಮೇಶ್ವರ್ ಪರವಾಗಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮುದ್ದಹನುಮೇಗೌಡ ಪ್ರಚಾರ ನಡೆಸಿದ್ದಾರೆ. ಇದರಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಪರಮೇಶ್ವರ್ ಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ.