ಬೆಂಗಳೂರು : ರಾಜ್ಯ ರಾಜಕಾರಣ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ.ಚುನಾವಣೆಯಲ್ಲಿ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಸರ್ಕಾರ ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಎಚ್. ಡಿ. ಕುಮಾರಸ್ವಾಮಿ ಸರ್ಕಾರದ ರಚನೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಬಿಜೆಪಿ ಕೂಡಾ ತಾವೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಾವೇ ಸರ್ಕಾರ ರಚಿಸುವುದಾಗಿ ಹೇಳುತ್ತಿದ್ದಾರೆ.
ಈ ಮಧ್ಯೆ ಎರಡು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದು, ಇವರ ಬೆಂಬಲ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷೇತರ ಶಾಸಕ ನಾಗೇಶ್ ಅವರ ಬಳಿ ತೆರಳಿದ ಸಚಿವ ಡಿ. ಕೆ. ಶಿವಕುಮಾರ್ ತಾವೇ ಅವರನ್ನು ಕರೆತಂದಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ. ಕೆ. ಶಿವಕುಮಾರ್ , ಇಬ್ಬರು ಪಕ್ಷೇತರ ಶಾಸಕರು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ನಾಗೇಂದ್ರ ಜೊತೆಯಲ್ಲಿಯೇ ಇದ್ದು, ಮತ್ತೊಬ್ಬ ಶಾಸಕರು ಕೂಡಾ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಜಾತ್ಯತೀತ ಸರ್ಕಾರ ರಚಿಸುತ್ತೇವೆ. ಇದಕ್ಕೆ ಅಗತ್ಯ ಇರುವಷ್ಟು ಸಂಖ್ಯಾ ಬಲ ಇರುವುದಾಗಿ ಅವರು ಹೇಳಿದರು.