ಬೆಂಗಳೂರು; ಯಾವೊಬ್ಬ ಶಾಸಕರೂ ನಾಪತ್ತೆಯಾಗಿಲ್ಲ, ಎಲ್ಲರೂ ನಮ್ಮೊಂದಿಗೆಯೇ ಇದ್ದಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ವಿಧಾನಸಭೆಯಲ್ಲಿ ಅತಂತ್ರವನ್ನು ಸೃಷ್ಟಿ ಮಾಡಿರುವ ಹಿನ್ನಲೆಯಲ್ಲಿ, ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಭಾರೀ ಕಸರತ್ತುಗಳನ್ನು ಮಾಡುತ್ತಿವೆ. ಒಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ, ಮತ್ತೊಂದೆಡೆ ರಾಜ್ಯಪಾಲ ವಜುಭಾಯ್ ವಾಲಾ ಅವರ ನಡೆ ತೀವ್ರ ಕುತೂಹಲ ಮೂಡಿಸಿದೆ.
ವಜುಭಾಯ್ ವಾಲಾ ಅವರು ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಮೊದಲು ಅವಕಾಶ ನೀಡಿದ್ದೇ ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್'ಗೆ ಆಪರೇಷನ್ ಕಮಲ ಭೀತಿ ಎದುರಾಗಲಿದೆ.
ಈ ಹಿನ್ನಲೆಯಲ್ಲಿ ಮೈತ್ರಿ ಹಾಗೂ ಸರ್ಕಾರ ರಚನೆ ಕುರಿತು ಕಾಂಗ್ರೆಸ್ ಹಿರಿಯ ನಾಯಕರು ನಗರದ ಕೆಪಿಸಿಸಿ ಕಚೇರಿಯಲ್ಲಿಂದು ಉನ್ನತ ಮಟ್ಟದ ಸಭೆಯನ್ನು ನಡೆಸುತ್ತಿದ್ದಾರೆ.
ಇದರಂತೆ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕೆಪಿಸಿಸಿ ಕಚೇರಿ ಬಂದಿರುವ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಯಾವೊಬ್ಬ ಶಾಸಕನೂ ನಾಪತ್ತೆಯಾಗಿಲ್ಲ. ಎಲ್ಲರೂ ನಮ್ಮೊಂದಿಗೆಯೇ ಇದ್ದಾರೆ. ರಾಜ್ಯದಲ್ಲಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದರಂತೆ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿಯವರು ಮಾತನಾಡಿ, ನಮ್ಮ ಶಾಸಕರನ್ನು ನಾವು ನಂಬಿದ್ದೇವೆ. ಬಿಜೆಪಿ ಅವರನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅವರಿಗೆ ಕೇವಲ ಅಧಿಕಾರ ಬೇಕು. ಪಕ್ಷದಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ. ಯಾರಲ್ಲೂ ಅಸಮಾಧಾನಗಳಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics