ರಾಜಕೀಯ

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟಕ್ಕೆ ಅಗ್ನಿಪರೀಕ್ಷೆ; ಸ್ಪೀಕರ್‌ ಸ್ಥಾನಕ್ಕೆ 'ರಮೇಶ್-ಸುರೇಶ್' ತೀವ್ರ ಪೈಪೋಟಿ

Srinivasamurthy VN
ಬೆಂಗಳೂರು: ಸಚಿವ ಸಂಪುಟ ರಚನೆ ಕುರಿತಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟಗಳ ನಡುವಿನ ತಿಕ್ಕಾಟ ಮುಂದುವರೆದಿರುವಂತೆಯೇ ಇತ್ತ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಗೆ ಸಿದ್ಧರಾಗಿದ್ದಾರೆ.
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ವಿಧಾನಸಭೆಯಲ್ಲಿ ಶುಕ್ರವಾರ ಮಧ್ಯಾಹ್ನ ವಿಶ್ವಾಸ ಮತ ಯಾಚಿಸಲಿದ್ದು, ವಿಶ್ವಾಸಮತ ಗೆಲ್ಲುವ ಭರವಸೆಯಲ್ಲಿದ್ದಾರೆ. ಇನ್ನು ವಿಶ್ವಾಸಮತಕ್ಕೂ ಪ್ರಮುಖವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ಸ್ಪೀಕರ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಎದುರಾಗಿದ್ದು, ಶತಾಯಗತಾಯ ಸ್ಪೀಕರ್ ಸ್ಥಾನವನ್ನು ತಾವೇ ಗೆಲ್ಲಬೇಕು ಎಂದು ಉಭಯ ಬಣಗಳು ತಂತ್ರಗಾರಿಕೆ ರೂಪಿಸಿವೆ.
ಇನ್ನು ಮಧ್ಯಾಹ್ನ 12.15ಕ್ಕೆ ಕಲಾಪ ಆರಂಭವಾಗಲಿದ್ದು, ಸ್ಪೀಕರ್‌ ಸ್ಥಾನಕ್ಕೆ ಶ್ರೀನಿವಾಸಪುರ ಕ್ಷೇತ್ರದ ಕೆ.ಆರ್‌. ರಮೇಶ್‍ಕುಮಾರ್ ಮತ್ತು ಬಿಜೆಪಿಯಿಂದ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್‌. ಸುರೇಶ್‍ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ವಿಶ್ವಾಸಮತ ಯಾಚನೆಗೂ ಮುನ್ನವೇ ಮೈತ್ರಿಕೂಟ ಸರ್ಕಾರಕ್ಕೆ ಮೊದಲ ಅಗ್ನಿ ಪರೀಕ್ಷೆ ಎದುರಾಗಿದ್ದು, ಮೈತ್ರಿಕೂಟ ಸರ್ಕಾರಕ್ಕೆ ಠಕ್ಕರ್ ನೀಡಲು ಬಿಜೆಪಿ ಕೂಡ ಸಿದ್ದವಾಗಿದೆ.
'ಕಾಲ' ನೋಡಿ ಸಮಯ ನಿಗದಿ!
ಇದೇ ಮೊದಲ ಬಾರಿಗೆ 'ಕಾಲ' ನೋಡಿ ವಿಧಾನಸಭೆ ಅಧಿವೇಶನದ ಸಮಯ ನಿಗದಿಪಡಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 10.30ರಿಂದ 12 ಗಂಟೆವರೆಗೆ 'ರಾಹು ಕಾಲ' ಇದೆ. ಹೀಗಾಗಿ 12.15ಕ್ಕೆ ಸದನ ಸಮಾವೇಶಗೊಳ್ಳಲಿದೆ. 'ವಿಶ್ವಾಸ ಮತ ಯಾಚನೆ ಕಲಾಪಕ್ಕೆ ಜೆಡಿಎಸ್ ಶಾಸಕ ಎಚ್‌.ಡಿ. ರೇವಣ್ಣ ಸಮಯ ನಿಗದಿಪಡಿಸಿದ್ದಾರೆ' ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.
SCROLL FOR NEXT