ರಾಜಕೀಯ

'ಸ್ಪೀಕರ್' ಗುದ್ದಾಟ: ಮೈತ್ರಿಕೂಟದ ರಮೇಶ್ ಕುಮಾರ್ ಆಯ್ಕೆ ಬಹುತೇಕ ಖಚಿತ

Srinivasamurthy VN
ಬೆಂಗಳೂರು: ವಿಶ್ವಾಸಮತಕ್ಕೂ ಮುನ್ನ ಸ್ಪೀಕರ್ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ನಾಮಪತ್ರ ಸಲ್ಲಿಕೆ ಮಾಡಿರುವ ರಮೇಶ್ ಕುಮಾರ್ ಅವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ವಿಶ್ವಾಸಮತ ಯಾಚನೆಗೂ ಮುನ್ನ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಹಿರಿಯ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ನೂತನ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮಧ್ಯಾಹ್ನ ಸುಮಾರು 12.15ಕ್ಕೆ ಸದನ ಆರಂಭವಾಗಲಿದ್ದು, ಸದನದ ನೇತೃತ್ವವನ್ನು ಹಂಗಾಮಿ ಸ್ಪೀಕರ್ ಕೆ.ಜೆ ಬೋಪಯ್ಯ ವಹಿಸಿಕೊಳ್ಳಲಿದ್ದಾರೆ.
ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಸ್ಪರ್ಧೆ ತಲೆನೋವಾಗಿ ಪರಿಣಮಿಸಿದ್ದು, ವಿಶ್ವಾಸಮತಕ್ಕೂ ಮೊದಲೇ ಅಡ್ಡಮತದಾನದ ಭೀತಿ ಕೂಡ ಎದುರಾಗಿದೆ. ಒಂದು ವೇಳೆ ಸದನದಲ್ಲಿ ಅಡ್ಡಮತದಾನ ನಡೆಯದೇ ಹೋದರೆ ಮೈತ್ರಿಕೂಟದ ರಮೇಶ್ ಕುಮಾರ್ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. 
ಕಾಂಗ್ರೆಸ್ ಪಕ್ಷ ಒಟ್ಟು 78 ಶಾಸಕರನ್ನು ಹೊಂದಿದ್ದು, ಜೆಡಿಎಸ್ 36 ಸದಸ್ಯ ಬಲವನ್ನು ಹೊಂದಿದೆ. ಇದಲ್ಲದೆ ಬಿಎಸ್ ಪಿ ಮತ್ತು ಪಕ್ಷೇತರ ಅಭ್ಯರ್ಥಿ ಕೆಪಿಜೆಪಿಯ ಚುನಾಯಿತ ಶಾಸಕ ಕೂಡ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲ ನೀಡುವ ಸಾದ್ಯತೆ ಇದೆ. ಹೀಗಾಗಿ ಎಲ್ಲ ಶಾಸಕರೂ ಬೆಂಬಲ ನೀಡಿದ್ದೇ ಆದರೆ ರಮೇಶ್ ಕುಮಾರ್ ಆಯ್ಕೆ ಬಹುತೇಕ ಖಚಿತ.
ಇನ್ನು ಇಬ್ಬರು ಸದಸ್ಯರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದರಿಂದ ಇಬ್ಬರಲ್ಲಿ ಒಬ್ಬರ ನಾಮಪತ್ರ ವಾಪಾಸ್ ಗೆ ಕಾಲಾವಕಾಶ ನೀಡುವ ಸಾಧ್ಯತೆ ಇದೆ. ಇಬ್ಬರೂ ವಾಪಸ್ ಪಡೆಯದಿದ್ದರೆ, ಸದನದಲ್ಲಿ ಸ್ಪೀಕರ್ ಆಯ್ಕೆ ಸಂಬಂಧ ಚುನಾವಣೆ ನಡೆಯಲಿದೆ. ಸದನದ ಸದಸ್ಯರು ಎದ್ದು ನಿಲ್ಲುವ ಮೂಲಕ ಅಥವಾ ಕೈ ಎತ್ತುವ ಮೂಲಕ ಸ್ಪೀಕರ್ ಚುನಾವಣೆಯಲ್ಲಿ ಸ್ಪೀಕರ್ ಆಯ್ಕೆಯಾಗಿರುತ್ತಾರೆ.
SCROLL FOR NEXT