ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ನಟಿ ರಮ್ಯಾ ಅವರು ಗುರುವಾರ ಮತ್ತೆ ವಿವಾದಾತ್ಮಕ ಟ್ಟೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಕ್ಕಿಯ ಹಿಕ್ಕೆಗೆ ಹೋಲಿಸಿದ್ದಾರೆ.
ದೇಶದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಅವರು ನಿನ್ನೆ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ಲೋಕಾರ್ಪಣೆ ನಂತರ ಪಟೇಲರ ಪ್ರತಿಮೆ ಬಳಿ ತೆರಳಿ ಅವರ ಪಾದ ಮುಟ್ಟಿ ನಮಸ್ಕರಿಸಿದ್ದರು. ಈ ಚಿತ್ರದಲ್ಲಿ ಮೋದಿ ಪ್ರತಿಮೆ ಕೆಳಗೆ ಪುಟ್ಟದಾಗಿ ಕಾಣಿಸುತ್ತಿದ್ದಾರೆ. ಆ ಚಿತ್ರವನ್ನು ಟ್ಟೀಟ್ ಮಾಡಿರುವ ಮಾಜಿ ಸಂಸದೆ ರಮ್ಯಾ ಇದು ಹಕ್ಕಿಯ ಹಿಕ್ಕೆನಾ..? ಎಂದು ಪ್ರಶ್ನಿಸಿದ್ದಾರೆ.
ದೇಶದ ಪ್ರಧಾನಿಯನ್ನ ರಮ್ಯಾ ಮತ್ತೆ ಅವಮಾನಿಸಿದ್ದಾರೆ ಎಂದು ನೆಟ್ಟಿಗರು ರಮ್ಯಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿಗೆ ಯಾಕೆ ಪದೇ ಪದೇ ಅವಮಾನ ಮಾಡುತ್ತಿದ್ದೀರಾ? ಈ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಒತ್ತಾಯಿಸಿದ್ದಾರೆ. ಆದರೆ ರಮ್ಯಾ ಮಾತ್ರ ತಮ್ಮ ವರಸೆಯನ್ನ ಬದಲಿಸಿಲ್ಲ. ಬದಲಾಗಿ ತಾವು ಯಾವುದೇ ಸ್ಪಷ್ಟನೆ ಕೊಡಲ್ಲ ಎಂದು ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸಿಗರ ಮೌಲ್ಯಗಳು ಕುಸಿಯುತ್ತಿವೆ ಎಂದು ಟ್ಟೀಟ್ ಮಾಡಿದೆ.